ADVERTISEMENT

ಶ್ರೀರಂಗಪಟ್ಟಣ: ಅರ್ಚಕರು, ವ್ಯಾಪಾರಿಗಳು ಕಂಗಾಲು..!

ಬಹುತೇಕ ಮುಚ್ಚಿದ ದೇಗುಲಗಳ ಬಾಗಿಲು

ಗಣಂಗೂರು ನಂಜೇಗೌಡ
Published 9 ಮೇ 2020, 19:45 IST
Last Updated 9 ಮೇ 2020, 19:45 IST
ಶ್ರೀರಂಗಪಟ್ಟಣ ತಾಲ್ಲೂಕು ಆರತಿಉಕ್ಕಡದಲ್ಲಿರುವ ಪ್ರಸಿದ್ಧ ಅಹಲ್ಯಾದೇವಿ ಮಾರಮ್ಮ ದೇಗುಲದ ಆವರಣ ಬಿಕೋ ಎನ್ನುತ್ತಿರುವುದು
ಶ್ರೀರಂಗಪಟ್ಟಣ ತಾಲ್ಲೂಕು ಆರತಿಉಕ್ಕಡದಲ್ಲಿರುವ ಪ್ರಸಿದ್ಧ ಅಹಲ್ಯಾದೇವಿ ಮಾರಮ್ಮ ದೇಗುಲದ ಆವರಣ ಬಿಕೋ ಎನ್ನುತ್ತಿರುವುದು   

ಶ್ರೀರಂಗಪಟ್ಟಣ: ಲಾಕ್‌ಡೌನ್‌ ಪರಿಣಾಮ ಪಟ್ಟಣ ಹಾಗೂ ಆಸುಪಾಸಿನ ಪ್ರಮುಖ ದೇಗುಲಗಳು ಬಂದ್‌ ಆಗಿದ್ದು, ಅವುಗಳನ್ನೇ ನೆಚ್ಚಿಕೊಂಡಿದ್ದ ಅರ್ಚಕರು ಮತ್ತು ನೂರಾರು ಮಂದಿ ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ, ಜ್ಯೋತಿರ್ಮಹೇಶ್ವರ ದೇವಾಲಯ, ಮೂಡಲಬಾಗಿಲು ಆಂಜನೇಯಸ್ವಾಮಿ ದೇವಾಲಯ, ಗಂಜಾಂ ನಿಮಿಷಾಂಬಾ ದೇಗುಲ, ದೊಡ್ಡ ಗೋಸಾಯಿಘಾಟ್‌ನ ಕಾಶಿ ವಿಶ್ವನಾಥ ದೇಗುಲ, ಆರತಿ ಉಕ್ಕಡದ ಅಹಲ್ಯಾದೇವಿ ಮಾರಮ್ಮ ದೇವಾಲಯ, ಕರಿಘಟ್ಟದ ಶ್ರೀನಿವಾಸ ದೇಗುಲಗಳನ್ನು ಮಾರ್ಚ್‌ 20ರಿಂದ ಬಂದ್‌ ಮಾಡಲಾಗಿದೆ.

‘ಎ’ ದರ್ಜೆಯಲ್ಲಿರುವ ಶ್ರೀರಂಗನಾಥಸ್ವಾಮಿ ಮತ್ತು ನಿಮಿಷಾಂಬಾ ದೇಗುಲಗಳ ಅರ್ಚಕರು ಸರ್ಕಾರದ ಸಂಬಳ ಪಡೆಯುತ್ತಿದ್ದಾರೆ. ಆದರೆ ‘ಸಿ’ ದರ್ಜೆಯ ದೇಗುಲಗಳಾದ ಮೂಡಲಬಾಗಿಲು ಆಂಜನೇಯ, ಜ್ಯೋತಿರ್ಮಹೇಶ್ವರ, ಆರತಿ ಉಕ್ಕಡದ ಅಹಲ್ಯಾದೇವಿ, ಕಾಶಿ ವಿಶ್ವನಾಥ ದೇವಾಲಯಗಳ ಅರ್ಚಕರಿಗೆ ಬಿಡಿಗಾಸೂ ಸಿಗುತ್ತಿಲ್ಲ.

ADVERTISEMENT

ಈ ದೇವಾಲಯಗಳ ಆವರಣದಲ್ಲಿ ವ್ಯಾಪಾರ, ವಹಿವಾಟಿನಿಂದಲೇ ಜೀವನ ನಡೆಸುತ್ತಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದಲ್ಲಿದ್ದ 50 ಮಂದಿ, ನಿಮಿಷಾಂಬಾ ದೇವಾಲಯ ಬಳಿಯ 60, ಆರತಿಉಕ್ಕಡ ದೇಗುಲ ಆವರಣದಲ್ಲಿದ್ದ 100ಕ್ಕೂ ಹೆಚ್ಚು ಮಂದಿ ಅಂಗಡಿಗಳನ್ನು ಬಿಟ್ಟು ಮನೆ ಸೇರಿದ್ದಾರೆ. ದಶಕದಿಂದ ದೇಗುಲಗಳ ಮುಂದೆ ಹಣ್ಣು, ತೆಂಗಿನ ಕಾಯಿ, ಹೂ, ಊದುಬತ್ತಿ, ಕರ್ಪೂರ, ದೀಪ–ಧೂಪ, ತರಕಾರಿ, ದೇವರ ವಿಗ್ರಹ, ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡಿ ಜೀವನ ಮಾಡುತ್ತಿದ್ದವರು, ಹೋಟೆಲ್‌ ನಡೆಸುತ್ತಿದ್ದವರು, ‘ತಡೆ’ ಒಡೆಯುತ್ತಿದ್ದವರು ಕಳೆದ 50 ದಿನಗಳಿಂದ ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ.

‘ದೇವಾಲಯಗಳು ಯಾವತ್ತು ತೆರೆಯುತ್ತವೆಯೋ....’ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

‘35 ವರ್ಷಗಳಿಂದ ನಮ್ಮ ಕುಟುಂಬ ದೇವಾಲಯದ ಮುಂದೆ ಹಣ್ಣು, ಕಾಯಿ ಮಾರಾಟ ಮಾಡಿ ಜೀವನ ನಡೆಸುತ್ತಿದೆ. ಮನೆ, ಮದುವೆ– ಮುಂಜಿವಿ, ಮಕ್ಕಳ ಸ್ಕೂಲು, ಆಸ್ಪತ್ರೆ ಖರ್ಚು ಎಲ್ಲವೂ ಇದರಿಂದಲೇ ನಡೆಯಬೇಕು. ಕೊರೊನಾ ಕಾರಣದಿಂದ ದೇವಾಲಯದ ಬಾಗಿಲು ಬಂದ್‌ ಮಾಡಿದ ಮೇಲೆ ಮನೆಯಲ್ಲೇ ಕೂತಿದ್ದೇವೆ. ಸಾಲಕ್ಕೆ ಬಡ್ಡಿ, ವಾರದ ಕಂತು ಕಟ್ಟಲು ಪರದಾಡುತ್ತಿದ್ದೇವೆ’ ಎಂದು ಆರತಿಉಕ್ಕಡದ ವ್ಯಾಪಾರಿಗಳಾದ ಸಣ್ಣಮ್ಮ, ಜಯಮ್ಮ ಇತರರು ಸಮಸ್ಯೆ ತೋಡಿಕೊಳ್ಳುತ್ತಾರೆ.

‘ಗಂಜಾಂ ನಿಮಿಷಾಂಬಾ ದೇವಾಲಯಕ್ಕೆ ಬರುವ ಭಕ್ತರಿಗೆ ಗುಲ್ಕಂದ ಮತ್ತು ಅಲಂಕಾರಿಕ ಗಿಡಗಳನ್ನು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದೆ. ಆದರೆ, ಕಳೆದ ಒಂದೂವರೆ ತಿಂಗಳಿನಿಂದ ದೇವಾಲಯ ಬಂದ್‌ ಆಗಿರುವುದರಿಂದ ನಯಾ ಪೈಸೆ ಸಂಪಾದನೆ ಇಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ’ ಎಂದು ನಾಗರಾಜು ಹೇಳುತ್ತಾರೆ.

‘ನನಗೆ ಬುದ್ಧಿ ಬಂದಾಗಿನಿಂದ ವ್ಯಾಪಾರಸ್ಥರಿಗೆ ಇಂತಹ ದೈನೇಸಿ ಸ್ಥಿತಿ ಉಂಟಾಗಿರಲಿಲ್ಲ. ದೇವಾಲಯಗಳ ಅರ್ಚಕರು ಮತ್ತು ವ್ಯಾಪಾರಿಗಳಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು’ ಎಂದು ಅಹಲ್ಯಾದೇವಿ ದೇವಾಲಯ ಟ್ರಸ್ಟ್‌ ಅಧ್ಯಕ್ಷ ಎಂ. ಚಂದ್ರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.