ADVERTISEMENT

ಡಯಾಲಿಸಿಸ್‌ ಘಟಕದಲ್ಲಿ ತಾಂತ್ರಿಕ ಸಮಸ್ಯೆ

ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 23 ಮೇ 2023, 14:20 IST
Last Updated 23 ಮೇ 2023, 14:20 IST
ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಘಟಕ
ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಘಟಕ   

ಶ್ರೀರಂಗಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಘಟಕದಲ್ಲಿ ಫಿಲ್ಟರ್‌ ಯಂತ್ರದ ಸಮಸ್ಯೆಯಿಂದಾಗಿ ರೋಗಿಗಳಿಗೆ ಸಕಾಲಕ್ಕೆ ಡಯಾಲಿಸಿಸ್‌ ಮಾಡಲಾಗದೆ ಸಮಸ್ಯೆ ಉಂಟಾಗಿದೆ.

ಇಲ್ಲಿನ ಡಯಾಲಿಸಿಸ್ ಕೆಂದ್ರದಲ್ಲಿ 28 ಮಂದಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿರುವುದು 250 ಲೀಟರ್‌ ಸಾಮರ್ಥ್ಯದ ಫಿಲ್ಟರ್‌ ಯಂತ್ರ. ಅದೂ ಕೂಡ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಡಯಾಲಿಸಿಸ್‌ ಮಾಡಿಸಿಕೊಳ್ಳುವ ರೋಗಿಗಳಿಗೆ ಕನಿಷ್ಠ 1000 ಲೀಟರ್‌ ಫಿಲ್ಟರ್‌ ಮಾಡಬಲ್ಲ ಯಂತ್ರದ ಅಗತ್ಯವಿದೆ. ಎರಡು ವರ್ಷಗಳಿಂದ ಫಿಲ್ಟರ್‌ ಯಂತ್ರಕ್ಕೆ ಇಲ್ಲಿನ ಸಿಬ್ಬಂದಿ ಬೇಡಿಕೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ, ಆರೋಗ್ಯ ಇಲಾಖೆ ಫಿಲ್ಟರ್‌ ಯಂತ್ರ ಒದಗಿಸಿಲ್ಲ. ಡಯಾಲಿಸಿಸ್‌ ಘಟಕದ ಟೆಂಡರ್‌ ಪಡೆಯಲು ಕೊಲ್ಕತ್ತಾ ಮೂಲದ ಏಜೆನ್ಸಿ ಅರ್ಜಿ ಹಾಕಿದೆ. ಆ ಸಂಸ್ಥೆಗೆ ಸರ್ಕಾರ ಇದುವರೆಗೆ ಅಧಿಕೃತವಾಗಿ ಟೆಂಡರ್‌ ನೀಡಿಲ್ಲ. ಆಸ್ಪತ್ರೆ ವತಿಯಿಂದ ಫಿಲ್ಟರ್‌ ಯಂತ್ರ ಅಳವಡಿಸಲು ಅನುದಾನ ಇಲ್ಲ. ಹಾಗಾಗಿ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ.

‘ಈ ಮೊದಲು ಬಿಆರ್‌ಎಸ್‌ ಹೆಸರಿನ ಸಂಸ್ಥೆ ಡಯಾಲಿಸಿಸ್‌ ಘಟಕ ನಿರ್ವಹಣೆಯ ಟೆಂಡರ್‌ ಪಡೆದಿತ್ತು. ಎರಡು ವರ್ಷಗಳ ಹಿಂದೆ ಆ ಸಂಸ್ಥೆ ದೂರ ಸರಿಯಿತು. ಬಳಿಕ ಸಮಸ್ಯೆ ಉಲ್ಬಣಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ದಿನಕ್ಕೆ 10 ಮಂದಿಗೆ ಡಯಾಲಿಸಿಸ್‌ ಮಾಡುವುದೂ ಕಷ್ಟ. ಫಿಲ್ಟರ್‌ ಯಂತ್ರ ಮೇಲಿಂದ ಮೇಲೆ ಕೆಡುತ್ತಿದೆ. ಫಿಲ್ಟರ್‌ ಯಂತ್ರದ ನೀರು ಖಾಲಿಯಾಗದಂತೆ ಎಚ್ಚರ ವಹಿಸುತ್ತಾ ಪಾಳಿಯ ಪ್ರಕಾರ ಡಯಾಲಿಸಿಸ್‌ ಮಾಡುತ್ತಿದ್ದೇವೆ’ ಎಂದು ಘಟಕದ ಸ್ಟಾಫ್‌ ನರ್ಸ್‌ ರವಿ ಮಾಹಿತಿ ನೀಡಿದರು.

ADVERTISEMENT

‘ಹೊಸದಾಗಿ ಡಯಾಲಿಸಿಸ್‌ ಮಾಡಿಸಿಕೊಳ್ಳುವವರಿಗೆ ಸಮರ್ಪಕವಾಗಿ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಡಯಾಲಿಸಿಸ್‌ ಘಟಕದಲ್ಲಿ ನಾಲ್ವರು ಸ್ಟಾಫ್‌ ನರ್ಸ್‌ ಮತ್ತು ಇಬ್ಬರು ಡಿ ಗ್ರೂಪ್‌ ನೌಕರರಿದ್ದು, ನಮಗೂ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಇದರಿಂದ ಸಿಬ್ಬಂದಿ ಕೂಡ ಕೆಲಸ ಬಿಟ್ಟು ಹೋಗುತ್ತಿದ್ದಾರೆ’ ಎಂದು ಹೇಳಿದರು.

‘ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಾರಕ್ಕೆ ₹6 ಸಾವಿರ ಹಣ ಕೊಟ್ಟು ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದೇನೆ. ಇಲ್ಲಿ ಡಯಾಲಿಸಿಸ್‌ ಮಾಡುವಂತೆ ಎರಡು ತಿಂಗಳಿಂದ ಮನವಿ ಮಾಡುತ್ತಿದ್ದೇನೆ. ಅಗತ್ಯ ಸೌಲಭ್ಯ ಇಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಡಯಾಲಿಸಿಸ್‌ ಘಟಕ ಇದ್ದೂ ಇಲ್ಲದಂತಾಗುದೆ’ ಎಂದು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ತಾಲ್ಲೂಕಿನ ದರಸಗುಪ್ಪೆ ಗ್ರಾಮದ ಹೇಮಂತ್‌ ಕುಮಾರ್‌ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಡಯಾಲಿಸಿಸ್‌ ಘಟಕ ನಿರ್ವಹಣೆಯ ಜವಾಬ್ದಾರಿಯನ್ನು ಸರ್ಕಾರ ಖಾಸಗಿ ಏಜೆನ್ಸಿಗೆ ವಹಿಸಿದೆ. ಇದು ನಮ್ಮ ಸುಪರ್ದಿಯಲ್ಲಿ ಇಲ್ಲ’ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪಿ. ಮಾರುತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಹೇಮಂತ್‌ ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.