
ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಪ್ರಜ್ಞಾವಂತರ ವೇದಿಕೆ ಬುಧವಾರ ಏರ್ಪಡಿಸಿದ್ದ 7ನೇ ವರ್ಷದ ಸಂವಿಧಾನೋತ್ಸವದ ನಿಮಿತ್ತ ಸಂವಿಧಾನದ ಬೃಹತ್ ಪ್ರತಿಯನ್ನು ಮುಖ್ಯ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.
ಪಟ್ಟಣದ ಕುವೆಂಪು ವೃತ್ತದ ಬಳಿ ಪುರಸಭೆ ಮಾಜಿ ಅಧ್ಯಕ್ಷೆ ಶೀಲಾ ನಂಜುಂಡಯ್ಯ ಮೆರವಣಿಗೆಗೆ ಚಾಲನೆ ನೀಡಿದರು. ಪೂರ್ವ ಕೋಟೆ ದ್ವಾರ, ಪುರಸಭೆ ವೃತ್ತ, ಎಲ್‌ಐಸಿ ಕಚೇರಿ ವೃತ್ತ, ಮಹಾಲಕ್ಷ್ಮಿ ದೇವಾಲಯ ವೃತ್ತದ ಮಾರ್ಗವಾಗಿ ಅಂಬೇಡ್ಕರ್ ವೃತ್ತದ ವರೆಗೆ ಮೆರವಣಿಗೆ ನಡೆಯಿತು. ವಕೀಲರು, ರೈತ ಸಂಘ, ದಲಿತ ಸಂಘರ್ಷ ಸಮಿತಿ, ಮುಸ್ಲಿಂ ಸೌಹಾರ್ದ ಒಕ್ಕೂಟದ ಸದಸ್ಯರು ರಾಷ್ಟ್ರ ಧ್ವಜ, ಅಂಬೇಡ್ಕರ್ ಭಾವಚಿತ್ರ ಮತ್ತು ಸಂವಿಧಾನದ ಮುಖ್ಯಾಂಶಗಳ ಫಲಕಗಳನ್ನು ಹಿಡಿದು ಹೆಜ್ಜೆ ಹಾಕಿದರು. ಚರ್ಮವಾದ್ಯ ಕಲಾವಿದರು ಮೆರವಣಿಗೆಗೆ ಮೆರಗು ನೀಡಿದರು.
ಪ್ರಜ್ಞಾವಂತರ ವೇದಿಕೆ ಸಂಚಾಲಕ ಹಾಗೂ ವಕೀಲ ಸಿ.ಎಸ್. ವೆಂಕಟೇಶ್ ಮಾತನಾಡಿ, ‘ಜನರಲ್ಲಿ ಸಂವಿಧಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಕಳೆದ 7 ವರ್ಷಗಳಿಂದ ಸಂವಿಧಾನೋತ್ಸವ ಆಚರಿಸಲಾಗುತ್ತಿದೆ. ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿಸುವುದು ಮುಖ್ಯ ಉದ್ದೇಶವಾಗಿದೆ. ಜೀವನ ನಡೆಸಲು ಬೇಕಾದ ಸರಳ ಕಾನೂನುಗಳನ್ನು ತಿಳಿಸಿಕೊಡಬೇಕು ಎಂಬುದು ನಮ್ಮ ಮುಖ್ಯ ಉದ್ದೇಶ’ ಎಂದು ಹೇಳಿದರು.
ಒಕ್ಕಲಿಗರ ವಿಕಾಸ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷೆ ಎಚ್.ಎಲ್. ಯಮುನಾ ಮಾತನಾಡಿ, ‘ಪ್ರಜ್ಞಾವಂತರ ವೇದಿಕೆ ಸಂವಿಧಾನದ ಮೂಲ ತತ್ವಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮಾದರಿ ಕೆಲಸ ಮಾಡುತ್ತಿದೆ’ ಎಂದು ಶ್ಲಾಘಿಸಿದರು. ‘ಭಾರತೀಯರಿಗೆ ಸಂವಿಧಾನವೇ ಪವಿತ್ರ ಗ್ರಂಥ. ಅದರ ಅನುಸಾರ ನಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ’ ಎಂದು ಶೀಲಾ ನಂಜುಂಡಯ್ಯ ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಇಲ್ಯಾಸ್ ಅಹಮದ್ ಖಾನ್, ಭಾರತೀಯ ಬೌದ್ಧ ಮಹಾಸಭಾ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಕೆ.ಟಿ. ರಂಗಯ್ಯ ಮಾತನಾಡಿದರು. ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕಡತನಾಳು ಬಾಲಕೃಷ್ಣ, ರೈತ ಸಂಘದ ಸಂಚಾಲಕ ಪಾಂಡು, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಬಿ.ಎಸ್. ರಮೇಶ್, ದಸಂಸ ಮುಖಂಡರಾದ ನಂಜುಂಡಮೌರ್ಯ, ವಿಜಯಕುಮಾರ್, ಸುರೇಶ್ ಕುಮಾರ್, ರಂಗಸ್ವಾಮಿ, ಕೆ. ಶೆಟ್ಟಹಳ್ಳಿ ಅಪ್ಪಾಜಿ. ಎಸ್.ಎಂ. ಶಿವಕುಮಾರ್, ಅಬ್ದುಲ್ ಸುಕ್ಕೂರ್, ಚಿಕ್ಕತಮ್ಮೇಗೌಡ, ಸಿಂಧುವಳ್ಳಿ ಅಕ್ಬರ್, ಅಫ್ರೀನ್ ತಾಜ್, ವೆಂಟಕಮ್ಮ, ಸುಜಾತಾ ಅರಸ್, ಕುಮಾರ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.