ADVERTISEMENT

‘ಪ್ರೊ. ಕರಿಮುದ್ದೀನ್ ಮಸೀದಿಗೆ ಹೋಗಲಿಲ್ಲ, ಬಾಡು ತಿನ್ನಲಿಲ್ಲ’: ಪ್ರೊ. ಭೂಮಿಗೌಡ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 2:30 IST
Last Updated 6 ಸೆಪ್ಟೆಂಬರ್ 2025, 2:30 IST
ಶ್ರೀರಂಗಪಟ್ಟಣದ ಸಂಜಯ ಪ್ರಕಾಶನ ಸಭಾಂಗಣದಲ್ಲಿ ಚಿಂತನ ಚಿತ್ತಾರ ಪ್ರಕಾಶನ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಎಸ್‌. ತುಕಾರಾಂ ಅವರ ‘ಲೋಕಪಾವನ– ಪ್ರೊ.ಎಂ. ಕರಿಮುದ್ದೀನ್‌ ಅವರ ಜೀವನ ಮತ್ತು ಸಹಿಷ್ಣುತೆಯ ಚಿತ್ರಣ’ ಕೃತಿಯನ್ನು ಸಾಹಿತಿ ಪ್ರೊ. ಭೂಮಿಗೌಡ ಲೋಕಾರ್ಪಣೆ ಮಾಡಿದರು. ಹಿರಿಯ ವೈದ್ಯ ಡಾ.ಬಿ. ಸುಜಯಕುಮಾರ್‌, ಬಾಲಸುಬ್ರಹ್ಮಣ್ಯ ಇದ್ದಾರೆ
ಶ್ರೀರಂಗಪಟ್ಟಣದ ಸಂಜಯ ಪ್ರಕಾಶನ ಸಭಾಂಗಣದಲ್ಲಿ ಚಿಂತನ ಚಿತ್ತಾರ ಪ್ರಕಾಶನ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಎಸ್‌. ತುಕಾರಾಂ ಅವರ ‘ಲೋಕಪಾವನ– ಪ್ರೊ.ಎಂ. ಕರಿಮುದ್ದೀನ್‌ ಅವರ ಜೀವನ ಮತ್ತು ಸಹಿಷ್ಣುತೆಯ ಚಿತ್ರಣ’ ಕೃತಿಯನ್ನು ಸಾಹಿತಿ ಪ್ರೊ. ಭೂಮಿಗೌಡ ಲೋಕಾರ್ಪಣೆ ಮಾಡಿದರು. ಹಿರಿಯ ವೈದ್ಯ ಡಾ.ಬಿ. ಸುಜಯಕುಮಾರ್‌, ಬಾಲಸುಬ್ರಹ್ಮಣ್ಯ ಇದ್ದಾರೆ   

ಶ್ರೀರಂಗಪಟ್ಟಣ: ‘ಗಂಜಾಂನ ಬಹುಭಾಷಾ ವಿದ್ವಾಂಸ ದಿವಂಗತ ಪ್ರೊ. ಕರಿಮುದ್ದೀನ್ ತಮ್ಮ 91 ವರ್ಷಗಳ ಬದುಕಿನಲ್ಲಿ ಎಂದೂ ಮಸೀದಿಗೆ ಹೋಗಲಿಲ್ಲ, ಬಾಡು ತಿನ್ನಲಿಲ್ಲ’ ಎಂದು ಸಾಹಿತಿ ಪ್ರೊ. ಭೂಮಿಗೌಡ ಹೇಳಿದರು.

ಪಟ್ಟಣದ ಸಂಜಯ ಪ್ರಕಾಶನ ಸಭಾಂಗಣದಲ್ಲಿ, ಚಿಂತನ ಚಿತ್ತಾರ ಪ್ರಕಾಶನದಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಎಸ್‌. ತುಕಾರಾಂ ಅವರ ‘ಲೋಕಪಾವನ– ಪ್ರೊ.ಎಂ. ಕರಿಮುದ್ದೀನ್‌ ಅವರ ಜೀವನ ಮತ್ತು ಸಹಿಷ್ಣುತೆಯ ಚಿತ್ರಣ’ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

‘ಪ್ರೊ.ಎಂ. ಕರಿಮುದ್ದೀನ್‌ ನನಗೆ ಕನ್ನಡದ ಪ್ರಾಧ್ಯಾಪಕರಾಗಿದ್ದವರು. ಕಬ್ಬಿಣದ ಕಡಲೆಯಾಗಿದ್ದ ಶಬ್ದಮಣಿದರ್ಪಣ ಹಳೆಗನ್ನಡ ಕಾವ್ಯವನ್ನು ಮನ ಮುಟ್ಟುವಂತೆ ಬೋಧಿಸಿದರು. ಅವರ ವಿದ್ವತ್ತು ಮತ್ತು ವಾಗ್ವೈಖರಿ ಬೆರಗು ಹುಟ್ಟಿಸುತ್ತಿತ್ತು. ಟಿಪ್ಪು ಸುಲ್ತಾನ್‌ ಮತ್ತು ಹೈದರಾಲಿ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದರು. ಎಲ್ಲ ಧರ್ಮಗಳ ಮಾನವೀಯತೆಯ ಸಾರವನ್ನು ಗ್ರಹಿಸಿ ಇತರರಿಗೂ ಉಣಬಡಿಸುತ್ತಿದ್ದರು. ಅಂತಹ ಮೇರು ವ್ಯಕ್ತಿಯ ಬಗ್ಗೆ ಪ್ರೊ. ಎಸ್‌. ತುಕಾರಾಂ ವಾಸ್ತವಾಂಶಗಳನ್ನು ಆಧರಿಸಿದ ಅರ್ಥಪೂರ್ಣ ಪುಸ್ತಕ ಬರೆದಿದ್ದಾರೆ’ ಎಂದು ಹೇಳಿದರು.

‘ಟಿಪ್ಪು ಸುಲ್ತಾನ್‌ ಕುರಿತ ಪಠ್ಯವನ್ನು ತೆಗೆದು ಹಾಕಲು ಹಿಂದುತ್ವವಾದಿಗಳು ಹುನ್ನಾರ ನಡೆಸಿದರು. ದೇವಾಲಯಗಳನ್ನು ನಾಶಪಡಿಸಿದ ಎಂದು ಅಪಪ್ರಚಾರ ಮಾಡಿದರು. ರಾಜಕೀಯ ಲಾಭಕ್ಕಾಗಿ ಹುರಿಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿಕ ವ್ಯಕ್ತಿಗಳನ್ನು ಸೃಷ್ಟಿಸಿದರು. ಶೃಂಗೇರಿ ಮಠವನ್ನು ಮರಾಠರ ದಾಳಿಯಿಂದ ರಕ್ಷಿಸಿದ, ಹಿಂದೂ ದೇವಾಲಯಗಳಿಗೆ ಉದಾರವಾಗಿ ದೇಣಿಗೆ ನೀಡಿದ ಟಿಪ್ಪು ಮತಾಂಧನಾಗಲು ಹೇಗೆ ಸಾಧ್ಯ? ಒಡೆಯರ್‌ ವಂಶದ ರಾಣಿಯ ಜತೆ ಸೇರಿ ಮಸಲತ್ತು ನಡೆಸಿ ಬ್ರಿಟಿಷರಿಂದ ಟಿಪ್ಪು ಸುಲ್ತಾನನ್ನು ಕೊಲ್ಲಿಸಿದ ದಿವಾನ್ ಪೂರ್ಣಯ್ಯನ ಬಗ್ಗೆ ಏಕೆ ಮಾತನಾಡುವುದಿಲ್ಲ?’ ಎಂದು ಪ್ರೊ. ಭೂಮಿಗೌಡ ಪ್ರಶ್ನಿಸಿದರು.

ಹಿರಿಯ ವೈದ್ಯ ಡಾ.ಬಿ. ಸುಜಯಕುಮಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಪ್ರೊ.ಎಂ. ಕರಿಮುದ್ದೀನ್‌ ಅವರದ್ದು ಸರ್ವಧರ್ಮ ಸಹಿಷ್ಣು ವ್ಯಕ್ತಿತ್ವ. ಅಪಾರ ಪಾಂಡಿತ್ಯ ಪಡೆದಿದ್ದ ಅವರು ಜೀವನಪೂರ್ತಿ ಸಮಚಿತ್ತ ಭಾವದಿಂದ ಬದುಕಿದರು. ಧರ್ಮ, ಜಾತಿ, ಪಂಗಡಗಳ ಚೌಕಟ್ಟು ಮೀರಿದ್ದ ವಿಶೇಷ ವ್ಯಕ್ತಿಯಾಗಿದ್ದರು’ ಎಂದರು.

ನಿವೃತ್ತ ತಹಶೀಲ್ದಾರ್‌ ಬಾಲಸುಬ್ರಹ್ಮಣ್ಯ ಮಾತನಾಡಿ, ‘ಕರಿಮುದ್ದೀನ್‌ ನಿಜಾರ್ಥದಲ್ಲಿ ಜ್ಞಾನದ ಬೆಳಕು. ಅವರಲ್ಲಿ ಸರಳತೆ ಮತ್ತು ಸಮಯ ಪ್ರಜ್ಞೆ ಇತ್ತು. ಹಣ, ಪ್ರಶಸ್ತಿ, ಪುರಸ್ಕಾರಗಳಿಗೆ ಎಂದೂ ಆಸೆಪಟ್ಟವರಲ್ಲ. ಕಿರಿಯರನ್ನೂ ಗೌರವದಿಂದ ಕಾಣುತ್ತಿದ್ದರು. ಗಂಜಾಂನ ಪುಟ್ಟ ಕೊಠಡಿಯೇ ಅವರ ಪ್ರಪಂಚವಾಗಿತ್ತು’ ಎಂದು ತಿಳಿಸಿದರು.

ಪುಸ್ತಕದ ಲೇಖಕ ಪ್ರೊ.ಎಸ್‌. ತುಕಾರಾಂ, ಚಿಂತನ ಚಿತ್ತಾರ ಪ್ರಕಾಶನದ ನಿಂಗರಾಜ್‌ ಚಿತ್ತಣ್ಣನವರ್, ಸಂಜಯ ಪ್ರಕಾಶನದ ಎಸ್‌.ಎಂ. ಶಿವಕುಮಾರ್‌, ವಕೀಲರಾದ ಎಸ್‌.ಆರ್‌. ಸಿದ್ದೇಶ್, ಸಿ.ಎಸ್‌. ವೆಂಕಟೇಶ್, ಧನಂಜಯ ಬ್ಯಾಡರಹಳ್ಳಿ, ಕ್ಯಾತನಹಳ್ಳಿ ಚಂದ್ರಣ್ಣ, ಸಬಿಹಾ ಭೂಮಿಗೌಡ, ಪ್ರೊ. ಇಲ್ಯಾಸ್ ಅಹಮದ್‌ಖಾನ್‌, ಶೀಲಾ ನಂಜುಂಡಯ್ಯ, ರೈತ ಮುಖಂಡ ಪಾಂಡು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.