ADVERTISEMENT

ಅಂಗನವಾಡಿ ಕಾರ್ಯಕರ್ತೆಯರಿಂದ ಕಚೇರಿ ಮುತ್ತಿಗೆ

ಗೌರವಧನ ಬಾಕಿ, ಮಾತೃವಂದನಾ, ಮಾತೃಪೂರ್ಣ ಯೋಜನೆ ಹಣ ನೀಡುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 12:25 IST
Last Updated 10 ಜುಲೈ 2019, 12:25 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಮಂಡ್ಯ: ಕೇಂದ್ರ ಸರ್ಕಾರದಿಂದ ಒಂದು ವರ್ಷದಿಂದ ಬಾಕಿ ಇರುವ ಗೌರವಧನ, ಮಾತೃವಂದನಾ ಹಾಗೂ ಮಾತೃಪೂರ್ಣ ಯೋಜನಾ ಹಣದ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

ಕೇಂದ್ರ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಬದುಕಿನ ಜೊತೆ ಚೆಲ್ಲಾಡುತ್ತಿದೆ. 2018ನೇ ಸಾಲಿನ ಅಕ್ಟೋಬರ್ ತಿಂಗಳಿಂದ ಗೌರವಧನ ಬಿಡುಗಡೆ ಮಾಡಿಲ್ಲ. ಅಂಗನವಾಡಿ ನೌಕರರಿಗೆ ಬರಬೇಕಾದ ಮಾತೃವಂದನಾ ಹಾಗೂ ಮಾತೃಪೂರ್ಣ ಯೋಜನೆ ಹಣವನ್ನೂ ನೀಡುತ್ತಿಲ್ಲ. ಅಪೌಷ್ಟಿಕ ಮುಕ್ತ ಭಾರತ ನಿರ್ಮಾಣಕ್ಕಾಗಿ ಅಂಗನವಾಡಿ ಕೇಂದ್ರಗಳಿಗೆ ನೀಡುತ್ತಿದ್ದ ಮೊಟ್ಟೆ, ತರಕಾರಿ ಹಣವನ್ನೂ ಬಿಡುಗಡೆ ಮಾಡದೆ ಮಕ್ಕಳು ಅಪೌಷ್ಟಿಕತೆಯಿಂದ ನರಳುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರಾಥಮಿಕ ಶಾಲಾ ಪೂರ್ವ ಹಂತದ ಮಕ್ಕಳಿಗಾಗಿ ಆರೋಗ್ಯ, ಆಹಾರ, ಶಿಕ್ಷಣ ನೀಡಲು ಶ್ರಮಿಸುತ್ತಿದ್ದ ಐಸಿಡಿಎಸ್ ಯೋಜನೆಯನ್ನು ಸಂಪೂರ್ಣವಾಗಿ ಮುಚ್ಚಲು ಕೇಂದ್ರ ಸರ್ಕಾರ ಹುನ್ನಾರ ಮಾಡಿದೆ. ಅಂಗನವಾಡಿ ನೌಕರರ ಹುದ್ದೆಗಳು ಖಾಲಿ ಉಳಿದಿದ್ದರೂ ಸರಿಯಾಗಿ ನೌಕರರನ್ನು ನೇಮಕ ಮಾಡಿಕೊಳ್ಳುತ್ತಿಲ್ಲ. ಜೊತೆಗೆ ರಾಜ್ಯ ಸರ್ಕಾರ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ–ಯುಕೆಜಿ ಆರಂಭಿಸುವ ಮೂಲಕ ಅಂಗನವಾಡಿ ನೌಕರರ ಜೀವನ ಸರ್ವನಾಶ ಮಾಡಲು ಮುಂದಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಹೋರಾಟ ನಡೆದರೂ ಯಾವುದೇ ಪರಿಹಾರ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಅಂಗನವಾಡಿ ನೌಕರರಿಗೆ ರಾಜ್ಯ, ಕೇಂದ್ರ ಸರ್ಕಾರಿ ನೌಕರರಿಗೆ ಕೊಡುವ ಹೊಸ ಪಿಂಚಣಿ ಯೋಜನೆ ಅನುಷ್ಠಾನ ಮಾಡಬೇಕು. ಕಾರ್ಯಕರ್ತರು ಹಾಗೂ ಸಹಾಯಕಿಯರಿಗೆ ನಿವೃತ್ತಿ ವೇತನ ಹಾಗೂ ಪಾನ್‌ಕಾರ್ಡ್ ನೀಡಬೇಕು. 2015ರ ಏಪ್ರಿಲ್‌ನಿಂದ ನೇಮಕವಾದ ಕಾರ್ಯರ್ತರು ಹಾಗೂ ಸಹಾಯಕಿಯರನ್ನು ಕಾಯಂ ನಿವೃತ್ತಿ ಸೌಲಭ್ಯದಡಿ ತರಬೇಕು. ಈಗಾಗಲೇ ನಿವೃತ್ತಿ ಆದವರಿಗೆ ಕನಿಷ್ಠ ₹ 3 ಸಾವಿರ ಪಿಂಚಣಿ ನೀಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಮಾತೃಪೂರ್ಣ ಯೋಜನೆ ಯಶಸ್ವಿಗೊಳಿಸಲು ಹೆಚ್ಚುವರಿ ಸಹಾಯಕಿಯನ್ನು ಕೊಡಬೇಕು. ಅಂಗನವಾಡಿ ಕೇಂದ್ರಗಳಿಗೆ ಎಲ್ಲ ರೀತಿಯ ಗುಣಾತ್ಮಕ ಮೂಲ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

1995ರ ನಂತರ ಎಸ್ಸೆಸ್ಸೆಲ್ಸಿ ಆಧಾರದ ಮೇಲೆ ಅಂಗನವಾಡಿಗೆ ಆಯ್ಕೆಯಾಗಿರುವ ನೌಕರರಿಗೆ ತರಬೇತಿ ನೀಡುವ ಮೂಲಕ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು. ₹ 18 ಸಾವಿರ ಕನಿಷ್ಠ ವೇತನ ಜಾರಿ ಮಾಡಬೇಕು. ಸೇವಾ ಜೇಷ್ಠತೆ ಆಧಾರದಲ್ಲಿ ನೌಕರರ ವೇತನ ಹೆಚ್ಚಳ ಮಾಡಬೇಕು. ಮುಂಬಡ್ತಿ ಪಡೆಯಲು ಭೌಗೋಳಿಕ ವಿಸ್ತೀರ್ಣದ ಮಿತಿ ಸಡಿಲಿಸಬೇಕು. ಅನುಕಂಪದ ಆಧಾರದಲ್ಲಿ ನೌಕರಿ ಪಡೆಯಲು ಕುಟುಂಬ ಸದಸ್ಯರಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಮ್ಮ, ಖಜಾಂಚಿ ಪ್ರಮಿಳಾ ಕುಮಾರಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ನೌಕರರಾದ ಲತಾ, ಕಮಲ, ಸಾವಿತ್ರಮ್ಮ, ಧನಲಕ್ಷ್ಮಿ, ಗಾಯಿತ್ರಿ, ರೋಹಿಣಿ, ನಾಗಮ್ಮ, ಪುಷ್ಪಾವತಿ, ಜಯಶೀಲ ಇದ್ದರು.

ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಿಂದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ನಂತರ ಪೊಲೀಸರು ತಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.