ADVERTISEMENT

ಅಗತ್ಯವಸ್ತು ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಕಾಡುಕೊತ್ತನಹಳ್ಳಿಯಲ್ಲಿ ಕೃಷಿಕೂಲಿಕಾರರ ಸಂಘದ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 3:15 IST
Last Updated 6 ಆಗಸ್ಟ್ 2025, 3:15 IST
ಭಾರತೀನಗರ ಸಮೀಪದ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಪ್ರತಿಭಟಿಸಿದರು 
ಭಾರತೀನಗರ ಸಮೀಪದ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಪ್ರತಿಭಟಿಸಿದರು    

ಭಾರತೀನಗರ: ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಕೃಷಿಕೂಲಿಕಾರರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸಮೀಪದ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಪಂಚಾಯಿತಿ ವ್ಯಾಪ್ತಿಯ ಕೃಷಿಕೂಲಿಕಾರರ ಸಂಘದ ಮೂರು ಘಟಕಗಳನ್ನೊಳಗೊಂಡ ಸಮ್ಮೇಳನದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಂತರ ಮಾತನಾಡಿದ ಕೃಷಿಕೂಲಿಕಾರರ ಸಂಘದ ತಾಲ್ಲೂಕು ಕಾರ್ಯದರ್ಶಿ ಟಿ.ಪಿ.ಅರುಣ್‌ಕುಮಾರ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿರುವುದರಿಂದ ಕೃಷಿಕೂಲಿಕಾರರು ತತ್ತರಿಸುವಂತಾಗಿದ್ದು, ಬೆಲೆಗಳನ್ನು ಇಳಿಸಬೇಕೆಂದು ಆಗ್ರಹಿಸಿದರು.

ADVERTISEMENT

‘ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡದೆ ನಿರ್ಲಕ್ಷ್ಯ ವಹಿಸುತ್ತಿರುವ ಸರ್ಕಾರ ದಿನನಿತ್ಯ ಬಳಸುವ ಆಹಾರ ಪದಾರ್ಥಗಳೂ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಜೀವನ ನಿರ್ವಹಣೆಯೇ ಕಷ್ಟವಾಗಿದ್ದು, ಬೆಲೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಕೃಷಿಕೂಲಿಕಾರರ ಸಂಘದ ಹಿರಿಯ ಮುಖಂಡರಾದ ನಿಂಗೇಗೌಡ ಅವರು ಧ್ವಜಾರೋಹಣ ನೆರವೇರಿಸಿದರು. ಘಟಕದ ಸಮ್ಮೇಳನದಲ್ಲಿ ಕಾಡುಕೊತ್ತನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ 3 ಘಟಕಗಳನ್ನು ಸ್ಥಾಪನೆ ಮಾಡಲಾಯಿತು.

ಕೃಷಿಕೂಲಿಕಾರರ ಸಂಘದ ಘಟಕದ ಅಧ್ಯಕ್ಷ ಸುಧಾ, ಉಪಾಧ್ಯಕ್ಷ ಕಪನೀಗೌಡ, ಕಾರ್ಯದರ್ಶಿ ಮಹದೇವಮ್ಮ, ಸದಸ್ಯರಾದ ಪಲ್ಲವಿ, ನಾಗಣ್ಣ, ರೇಣುಕಾ, ಸಂಪತ್, ಶಂಕರ್, ಅಭಿಲಾಷ್, ಪುಟ್ಟಂಕೇಗೌಡ, ಪಲ್ಲವಿ, ನಾಗರಾಜು, ಸುಗುಣ, ಜಯಮ್ಮ, ಇದ್ದರು.

ನಿತ್ಯ ₹600 ಕೂಲಿ

ನೀಡಲು ಆಗ್ರಹ ‘ಕೃಷಿ ಕೂಲಿಕಾರರಿಗೆ ಪ್ರತೀ ದಿನ ನಾಲ್ಕು ಗಂಟೆಗಳ ಕಾಲ ಮಾಡುತ್ತಿದ್ದ ಕೆಲಸದ ಅವಧಿಯನ್ನು 8 ಗಂಟೆಗಳಿಗೆ ಏರಿಕೆಗೊಳಿಸಿರುವುದು ಸರಿಯಾದ ಕ್ರಮವಲ್ಲ. ಉದ್ಯೋಗ ಖಾತರಿ ಯೋಜನೆಯನ್ನು ಸಂಪೂರ್ಣ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿದೆ. ಹಾಗೇನಾದರೂ ಆದಲ್ಲಿ ಕೂಲಿಕಾರರ ಭವಿಷ್ಯ ಬೀದಿಗೆ ಬೀಳಲಿದೆ. ವರ್ಷಕ್ಕೆ 200 ದಿನ ಕೆಲಸ ನೀಡಿ ನಿತ್ಯ ₹600 ಕೂಲಿ ನೀಡಬೇಕು’ ಎಂದು ಕೃಷಿಕೂಲಿಕಾರರ ಸಂಘದ ತಾಲ್ಲೂಕು ಕಾರ್ಯದರ್ಶಿ ಟಿ.ಪಿ.ಅರುಣ್‌ಕುಮಾರ್‌ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.