ADVERTISEMENT

ಮಂಡ್ಯ: ಮೈಷುಗರ್‌ ಆಸ್ತಿ ಖಾಸಗೀಕರಣ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 11:25 IST
Last Updated 29 ಜೂನ್ 2025, 11:25 IST
ಮೈಷುಗರ್‌ ಆಸ್ತಿಯನ್ನು ಖಾಸಗೀಕರಣ ಮಾಡಲು ಹೊರಟಿರುವುದನ್ನು ಖಂಡಿಸಿ ಮಂಡ್ಯ ನಗರದ ಮೈಷುಗರ್‌ ಕಾರ್ಖಾನೆ ಅಧ್ಯಕ್ಷರ ಕಚೇರಿ ಎದುರು ವಿವಿಧ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು
ಮೈಷುಗರ್‌ ಆಸ್ತಿಯನ್ನು ಖಾಸಗೀಕರಣ ಮಾಡಲು ಹೊರಟಿರುವುದನ್ನು ಖಂಡಿಸಿ ಮಂಡ್ಯ ನಗರದ ಮೈಷುಗರ್‌ ಕಾರ್ಖಾನೆ ಅಧ್ಯಕ್ಷರ ಕಚೇರಿ ಎದುರು ವಿವಿಧ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು   

ಮಂಡ್ಯ: ಮೈಷುಗರ್‌ ಆಸ್ತಿಯನ್ನು ಖಾಸಗೀಕರಣ ಮಾಡಲು ಹೊರಟಿರುವ ಕಾರ್ಖಾನೆ ಅಧ್ಯಕ್ಷ ಸಿ.ಡಿ. ಗಂಗಾಧರ ಅವರ ನಡೆ ಖಂಡನೀಯವಾಗಿದ್ದು, ಗುತ್ತಿಗೆ ನಡೆಸಲು ಟೆಂಡರ್‌ ಕರೆದಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ರೈತ ಸಂಘ, ಸಿಐಟಿಯು, ಕರುನಾಡು ಸೇವಕರ ಸಂಘಟನೆ, ಕರವೇ ಕಾರ್ಯಕರ್ತರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ನಗರದ ಮೈಷುಗರ್‌ ಕಾರ್ಖಾನೆ ಅಧ್ಯಕ್ಷರ ಕಚೇರಿ ಎದುರು ಜಮಾವಣೆಗೊಂಡ ಕಾರ್ಯಕರ್ತರು ಮೈಷುಗರ್‌ ಆಸ್ತಿಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಈಗಾಗಲೇ ಅಧ್ಯಕ್ಷರು ಕರೆದಿರುವ ಸಭೆಯು ಜನ ಮತ್ತು ರೈತರ ವಿರೋಧಿ. ಈ ಕೂಡಲೇ ಟೆಂಡರ್ ಪ್ರಕ್ರಿಯೆ ನಿಲ್ಲಿಸಬೇಕು. ರೈತ ಕಾರ್ಮಿಕ, ಕೂಲಿಕಾರರ ಕಲ್ಯಾಣ ಮರೆತ ಮೈಷುಗರ್ ಅಧ್ಯಕ್ಷರು, ರೈತ ಕಾರ್ಮಿಕ ಕುಟುಂಬಗಳ ಕಾರ್ಯಕ್ರಮಗಳಿಗೆ ಕೈಗೆಟುಕುವ ದರದಲ್ಲಿ ಸಿಗುವ ರೈತ ಭವನಗಳನ್ನು ಖಾಸಗೀಕರಗೊಳಿಸಿವುದು ಎಷ್ಟು ಸರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಮೈಷುಗರ್ ಶಾಲೆ ನಿರ್ವಹಣೆ ಮಾಡಲು ಆಗಿಲ್ಲ ಎನ್ನುವ ನೆಪವೊಡ್ಡಿ ಗುತ್ತಿಗೆ ನೀಡಲು ಮುಂದಾಗಿರುವ ಅಧ್ಯಕ್ಷರ ನಡೆ ಸಮಂಜಸವಲ್ಲ, ಮೈಷುಗರ್ ಕಾರ್ಖಾನೆ ಲಾಭದಾಯಕವಾಗಿ ನಡೆಸಲು ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಆಧುನಿಕರಣಗೊಳ್ಳುವಂತೆ ತಕ್ಷಣ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ರೈತರು ಮತ್ತು ಜಿಲ್ಲೆಯ ಜನರು ಮೈಷುಗರ್ ವ್ಯಾಪ್ತಿಯ ಉಳಿದೆಲ್ಲ ಆಸ್ತಿ ರಕ್ಷಣೆಗೆ ಮುಂದಾಗಬೇಕು. ರೈತ ಭವನಗಳು ಹಾಗೂ ಶಾಲೆ ರೈತ ಕಾರ್ಮಿಕರ ಹಿತಕ್ಕಾಗಿ ಉಳಿಯಬೇಕು. ಇಲ್ಲವಾದರೆ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಮೈಷುಗರ್‌ ಆಸ್ತಿ ಉಳಿವಿಗಾಗಿ ಬೃಹತ್‌ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಇಂಡುವಾಳು ಚಂದ್ರಶೇಖರ್, ಸಿ.ಕುಮಾರಿ, ಶಿವಳ್ಳಿ ಚಂದ್ರು, ಎಂ.ಬಿ.ನಾಗಣ್ಣಗೌಡ, ಪಣಕನಹಳ್ಳಿ ಬೋರಲಿಂಗೇಗೌಡ, ಜಯರಾಮು, ಗೌಡಗೆರೆ ಪುಟ್ಟಸ್ವಾಮಿ, ಬೂದನೂರು, ಶಶಿಕಲಾ, ರಶೀದ್ ಭಾಗವಹಿಸಿದ್ದರು.

ಇವು ಮೈಷುಗರ್ ಆಸ್ತಿಗಳು
‘ಮೈಷುಗರ್ ಆಸ್ತಿಗಳಾದ ಹನಕೆರೆ ರೈತ ಭವನ ಎಸ್.ಐ. ಕೋಡಹಳ್ಳಿ ರೈತ ಭವನ ಮಂಡ್ಯ ನಗರ ಮೈಷುಗರ್ ಕಲ್ಯಾಣ ಮಂಟಪ ಹಾಗೂ ಮೈಷುಗರ್ ಶಾಲಾ –ಕಾಲೇಜುಗಳನ್ನು ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡಲಾಗುತ್ತಿದೆ. ಇವುಗಳನ್ನು ಖಾಸಗಿಕರಣ ಮಾಡಲು ಹೊರಟಿರುವುದು ಸರಿಯಲ್ಲ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.