ಶ್ರೀರಂಗಪಟ್ಟಣ: ಮೈಸೂರು ಸಂಸ್ಥಾನದ ಶ್ರೇಷ್ಠ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿ ಭೂಮಿತಾಯಿ ಹೋರಾಟ ಸಮಿತಿಯ ರೈತರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಮಿನಿ ವಿಧಾನಸೌಧದ ಎದುರು ಅರ್ಧ ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ, ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆ ಕೂಗಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಪರ ಜೈಕಾರ ಹಾಕಿದರು.
‘ತಮ್ಮ ತಂದೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ ಎಂಬ ಅಹಂನಿಂದ ಯತೀಂದ್ರ ಸಿದ್ದರಾಮಯ್ಯ ಉದ್ಧಟತನದ ಮಾತುಗಳಾಡಿದ್ದಾರೆ. ಮೈಸೂರು ಸಂಸ್ಥಾನವನ್ನು ದೇಶದಲ್ಲೇ ಮಾದರಿ ಸಂಸ್ಥಾನವನ್ನಾಗಿ ರೂಪಿಸಿದ ಪ್ರಗತಿಪರ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ತಮ್ಮ ತಂದೆಯನ್ನು ಹೋಲಿಸಿದ್ದಾರೆ. ಇದು ಮೂರ್ಖತನದ ಪರಮಾವಧಿ. ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣ, ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಸಕ್ಕರೆ ಕಾರ್ಖಾನೆ, ಕಾಗದದ ಕಾರ್ಖಾನೆ, ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ಕೃಷ್ಣರಾಜ ಒಡೆಯರ್ ಕಟ್ಟಿದ್ದಾರೆ. ನಾಲ್ವಡಿಯವರು ಕಟ್ಟಿದ ಕಾಲೇಜಿನಲ್ಲೇ ಸಿದ್ದರಾಮಯ್ಯ ಓದಿದ್ದಾರೆ. ಮಹಾತ್ಮ ಗಾಂಧಿ ಅವರಿಂದ ರಾಜರ್ಷಿ ಎಂದು ಕರೆಸಿಕೊಂಡ ಆದರ್ಶ ರಾಜನ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಆಡಿರುವ ಮಾತು ತೀರಾ ಬಾಲಿಶವಾದುದು’ ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಟೀಕಿಸಿದರು.
‘ಬಡ ಕುಟುಂಬದಿಂದ ಬಂದ ಸಿದ್ದರಾಮಯ್ಯ ನೂರಾರು ಕೋಟಿ ಆಸ್ತಿ ಮಾಡಿದ್ದಾರೆ. ಅವರ ಸೊಸೆ ಬೆಂಗಳೂರಿನಲ್ಲಿ ಐಷಾರಾಮಿ ಕ್ಲಬ್ ನಡೆಸುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಲೂಟಿ ಮಾಡಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಅವರು ಮೈಸೂರು ರಾಜ ಮನೆತನದ ಬಗ್ಗೆ ಹಿಂದೆ ಅಹಂಕಾರದ ಮಾತುಗಳಾಡಿದ್ದರು. ಅದೇ ಪ್ರವೃತ್ತಿಯನ್ನು ಈಗ ಅವರ ಮಗ ಮುಂದುವರಿಸುತ್ತಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಸಿದ್ದರಾಮಯ್ಯ ಮತ್ತು ಅವರ ಮಗ ಸ್ಪರ್ಧಿಸುವ ಕ್ಷೇತ್ರಗಳಿಗೆ ತೆರಳಿ ಅವರ ವಿರುದ್ಧ ಪ್ರಚಾರ ಮಾಡುವ ಮೂಲಕ ಅವರಿಗೆ ತಕ್ಕ ಉತ್ತರ ನೀಡಲಿದ್ದೇವೆ’ ಎಂದು ಹೇಳಿದರು.
ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ. ಕೃಷ್ಣ, ಮುಖಂಡರಾದ ಹನಿಯಂಬಾಡಿ ನಾಗರಾಜು, ಶಿವಣ್ಣ, ಮಹೇಶ್, ಬಲ್ಲೇನಹಳ್ಳಿ ಮಂಜುನಾಥ್, ಲಕ್ಷ್ಮಿನಾರಾಯಣ, ಕೆ. ಜಯರಾಂ, ಸುರೇಶ್, ಮಹದೇವು, ನಾಗರಾಜಯ್ಯ, ಶಂಕರ್, ಚಾಮುಂಡಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.