ಕೆ.ಆರ್.ಪೇಟೆ: ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದ ಗೇಟ್‌ನಲ್ಲಿ ಕೆಶಿಫ್ ವತಿಯಿಂದ ನಿರ್ಮಿಸಲಾಗುತ್ತಿರುವ ಜಲಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕೆಶಿಪ್ ವತಿಯಿಂದ ಪ್ರಯಾಣಿಕರ ಹೈಟೆಕ್ ಬಸ್ ತಂಗುದಾಣವನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ಅಗ್ರಹಾರಬಾಚಹಳ್ಳಿ ಗ್ರಾಮಸ್ಥರು ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ಶುಕ್ರವಾರ ಗ್ರಾಮದ ಗೇಟ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್ ಗೌಡ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ರಾಮದ ನೂರಾರು ಮುಖಂಡರು, ಯುವಕರು, ವಿದ್ಯಾರ್ಥಿಗಳು ಹೆದ್ದಾರಿ ನಿರ್ಮಾಣಕ್ಕೂ ಮುನ್ನ ಗೇಟ್ ಬಳಿ ತಂಗುದಾಣವಿತ್ತು. ಕಾಮಗಾರಿ ಸಂದರ್ಭ ಹಳೆ ತಂಗುದಾಣವನ್ನು ನಾಶಗೊಳಿಸಲಾಗಿದೆ. ನಾಶಗೊಳಿಸಿದ ಜಾಗದಲ್ಲಿ ಹೊಸದಾಗಿ ತಂಗುದಾಣ ನಿರ್ಮಾಣ ಮಾಡದಿರುವದರಿಂದ ಶಾಲಾ–ಕಾಲೇಜಿಗೆ ಹೋಗುವವರಿಗೆ ಪ್ರಯಾಣಿಕರಿಗೆ ತೊಂದರೆಯಾಗಿದೆ. ಕೂಡಲೇ ಅಗ್ರಹಾರಬಾಚಹಳ್ಳಿ ಗೇಟ್‌ನಲ್ಲಿ ಹೈಟೆಕ್ ಮಾದರಿಯ ಬಸ್ ನಿಲ್ದಾಣವನ್ನು ನಿರ್ಮಿಸಿ ಕೊಡಬೇಕು ಎಂದು ಕೆಶಿಫ್ ಅಧಿಕಾರಿಗಳನ್ನು ಒತ್ತಾಯ ಮಾಡಿದರು.
ಜುಲೈ 25ರೊಳಗೆ ಪ್ರಯಾಣಿಕರ ತಂಗುದಾಣ(ಬಸ್ ನಿಲ್ದಾಣ) ವನ್ನು ನಿರ್ಮಿಸಿಕೊಡಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಕೆಶಿಫ್ ಕಚೇರಿಯ ಮುಂದೆ ಬೃಹತ್ ತಮಟೆ ಚಳವಳಿ ನಡೆಸಲಾಗುವುದು ಹಾಗೂ ಕೆಶಿಫ್ ಅಧಿಕಾರಿಗಳು ಮಾಡುತ್ತಿರುವ ಹೆದ್ದಾರಿ ಕಾಮಗಾರಿ ತಡೆದು ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಯಜಮಾನ್ ಬೋರೇಗೌಡ, ಸಂತೋಷ್, ಗ್ರಾಮ ಪಂಚಾಯಿತಿ ಸದಸ್ಯರಾದ ಆರ್. ಶ್ರೀನಿವಾಸ್, ಈಶ್ವರ್, ಯುವ ಮುಖಂಡರಾದ ವೆಂಕಟೇಶ್, ಅಶೋಕ್, ಶಶಿ, ಎ.ಜಿ. ಸಂತೋಷ್, ಕೆ. ಸುನಿಲ್, ಎ.ಸಿ. ಅಭಿ, ಎ.ಎಸ್. ಕೃಷ್ಣಮೂರ್ತಿ, ರೂಪೇಶಾಚಾರ್, ಎ.ಎನ್. ಸ್ವಾಮಿ, ಅರ್ಚಕ ನವೀನ್, ನಜೀರ್, ಶಬ್ಬೀರ್, ಸೋಮಶೇಖರ್, ದೇವರಾಜು, ರಮೇಶ್ ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.