ADVERTISEMENT

6 ತಿಂಗಳ ವೇತನಕ್ಕಾಗಿ ಪ್ರತಿಭಟನೆ

ತಾಂತ್ರಿಕ ಸಮಸ್ಯೆ ಬಗೆಹರಿಸಲು ಆಗ್ರಹ: ಆರ್ಥಿಕ ಸಂಕಷ್ಟದಲ್ಲಿ ನರೇಗಾ ನೌಕರರು

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 5:49 IST
Last Updated 12 ಜುಲೈ 2025, 5:49 IST
ಆರು ತಿಂಗಳಿಂದ ವೇತನ ಪಾವತಿಯಾಗದಿರುವುದನ್ನು ಖಂಡಿಸಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮಂಡ್ಯ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಆರು ತಿಂಗಳಿಂದ ವೇತನ ಪಾವತಿಯಾಗದಿರುವುದನ್ನು ಖಂಡಿಸಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮಂಡ್ಯ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಮಂಡ್ಯ: ಆರು ತಿಂಗಳಿಂದ ವೇತನ ಪಾವತಿಯಾಗದಿರುವುದನ್ನು ಖಂಡಿಸಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಜ್ಯದಾದ್ಯಂತ 3,632 ನೌಕರರು ನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಲ್ಲಿ ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಭಾಗಿಯಾಗಿರುವ ನಮಗೆ ಅನ್ಯಾಯವಾಗಿದೆ. ವೇತನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನೌಕರರಿಗೆ ಕಳೆದ ಜನವರಿಯಿಂದ ಇಲ್ಲಿಯವರೆಗೆ ವೇತನ ಪಾವತಿಯಾಗಿಲ್ಲ. ಇದರಿಂದ ನೌಕರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಟುಂಬ ನಿರ್ವಹಣೆ, ದಿನಸಿ ಖರೀದಿ, ಮಕ್ಕಳ ಶಾಲಾ ಪ್ರವೇಶಾತಿ, ಕುಟುಂಬ ಸದಸ್ಯರ ವೈದ್ಯಕೀಯ ವೆಚ್ಚ, ಪ್ರಯಾಣವೆಚ್ಚ, ಸಾಲಗಳ ಮರುಪಾವತಿ, ಇಎಂಐ ಸೇರಿದಂತೆ ಅನೇಕ ಖರ್ಚುಗಳನ್ನು ನಿಭಾಯಿಸಲು ತೊಂದರೆ ಉಂಟಾಗುತ್ತಿದೆ ಎಂದು ಕಿಡಿಕಾರಿದರು.

ADVERTISEMENT

ಸಕಾಲದಲ್ಲಿ ವೇತನ ಪಾವತಿಯಾಗದಿರುವುದರಿಂದ ಸ್ನೇಹಿತರು, ಸಂಬಂಧಿಕರಲ್ಲಿ ಸ್ವಾಭಿಮಾನ ಅಡವಿಟ್ಟು ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಲೇವಾದೇವಿಗಾರರಿಂದ ಅನಿವಾರ್ಯವಾಗಿ ಸಾಲ ಮಾಡಿ ಕುಟುಂಬ ನಿರ್ವಹಿಸುವ ದಿನನಿತ್ಯದ ಆಗುಹೋಗುಗಳನ್ನು ನೋಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದು ದೂರಿದರು.

ಬಾಕಿ ವೇತನ ಪಾವತಿ ವಿಚಾರವಾಗಿ ಮೇಲಧಿಕಾರಿಗಳು ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲವೆಂದು ಇಲ್ಲಿಯವರೆಗೆ ಮಾಹಿತಿ ನೀಡುತ್ತಿದ್ದರು. ಪ್ರಸ್ತುತ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಬಿಡುಗಡೆಯಾಗಿದೆ. ರಾಜ್ಯದಿಂದ ಜಿಲ್ಲಾ ಕೇಂದ್ರಕ್ಕೆ ಅನುದಾನ ಬಿಡುಗಡೆಯಾಗಬೇಕಿದೆ. ಆದರೆ, ಹೊಸ ತಂತ್ರಾಂಶದಲ್ಲಿ ವೇತನ ಪಾವತಿ ಮಾಡಲು ತಾಂತ್ರಿಕ ಸಮಸ್ಯೆ ಬಗೆಹರಿಯದೇ ಇರುವುದರಿಂದ ವೇತನ ಪಾವತಿ ವಿಳಂಬವಾಗುತ್ತಿದೆ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ರವಿಕುಮಾರ್, ಮೋಹನ್‌ಗೌಡ, ಕಿರಣ್‌ಕುಮಾರ್, ಜಗದೀಶ್, ಆಶಾ, ಸಂಧ್ಯಾ, ಶಾಂತಮೂರ್ತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.