ADVERTISEMENT

ಮದ್ದೂರಿನಲ್ಲಿ ಕರವೇ ಪ್ರತಿಭಟನೆ: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 3:02 IST
Last Updated 24 ಅಕ್ಟೋಬರ್ 2025, 3:02 IST
ಅಂಗಡಿಗಳಲ್ಲಿ ನಾಮಫಲಕಗಳಲ್ಲಿ ಹಾಗೂ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಜಾಹೀರಾತು ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮದ್ದೂರಿನಲ್ಲಿ ಗುರುವಾರ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು
ಅಂಗಡಿಗಳಲ್ಲಿ ನಾಮಫಲಕಗಳಲ್ಲಿ ಹಾಗೂ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಜಾಹೀರಾತು ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮದ್ದೂರಿನಲ್ಲಿ ಗುರುವಾರ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು   

ಮದ್ದೂರು: ನಗರ ಸೇರಿದಂತೆ ತಾಲ್ಲೂಕಿನ ಎಲ್ಲಾ ಅಂಗಡಿಗಳಲ್ಲಿ ನಾಮಫಲಕಗಳಲ್ಲಿ ಹಾಗೂ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಜಾಹೀರಾತು ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ನೇತೃತ್ವ ವಹಿಸಿದ್ದ ತಾಲ್ಲೂಕು ಘಟಕದ ಅಧ್ಯಕ್ಷ ಮಣಿಗೆರೆ ರಾಮಚಂದ್ರು ಮಾತನಾಡಿ, ‘ರಾಜ್ಯದಲ್ಲಿ ಜಿಲ್ಲೆಯಲ್ಲಿಯೇ ಕನ್ನಡ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ರಾಜ್ಯ ಸರ್ಕಾರದ ನಿಬಂಧನೆಗಳ ಪ್ರಕಾರ ವ್ಯಾಪಾರಸ್ಥರು, ಕಂಪನಿಗಳು, ಜಾಹೀರಾತು ಸಂಸ್ಥೆಗಳು ತಮ್ಮ ನಾಮಫಲಕಗಳಲ್ಲಿ ಬಹುತೇಕ ಹೆಚ್ಚಾಗಿ ಕನ್ನಡ ಭಾಷೆಯನ್ನೇ ಬಳಸಬೇಕು. ಆದರೆ ಇಂಗ್ಲಿಷ್ ಅನ್ನು ಬಳಸುತ್ತಿದ್ದಾರೆ, ಇದನ್ನು ಅಧಿಕಾರಿಗಳು ನೋಡಿದರೂ ನೋಡದಂತೆ ಇರುವುದು ಬೇಸರ ಸಂಗತಿಯಾಗಿದೆ’ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವ್ಯಾಪಾರಿಗಳು ತಮ್ಮ ಅಂಗಡಿಗಳಲ್ಲಿ ಕಡ್ಡಾಯವಾಗಿ ಕನ್ನಡದ ನಾಮಫಲಕ ಹಾಕಬೇಕು, ಹೆದ್ದಾರಿಯಲ್ಲಿ ಶೇ 60ರಷ್ಟು ಕನ್ನಡ ಇರಬೇಕು ಇಲ್ಲದಿದ್ದರೆ ಅಂತಹ ಅಂಗಡಿ ಮಾಲೀಕರಿಗೆ ಹಾಗೂ ಕಂಪನಿಯವರಿಗೆ ಸಂಬಂಧಪಟ್ಟ ಆಧಿಕಾರಿಗಳು ನೋಟಿಸ್ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಕರವೇಯಿಂದ ಆಂಗ್ಲ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸಲಾಗುವುದು ಹಾಗೂ ಮಸಿ ಬಳಿಯುವ ಚಳವಳಿ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಸ್ಥಳಕ್ಕೆ ಬಂದ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರಿಗೆ ಮನವಿ ನೀಡಲಾಯಿತು. ‘ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಪರಶುರಾಮ್ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ವೇದಿಕೆಯ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ ಬೋರೇಗೌಡ, ಉಪಾಧ್ಯಕ್ಷರಾದ ಗಣೇಶ್, ಗಿರೀಶ್, ಕಾರ್ಯದರ್ಶಿ ಪುಟ್ಟರಾಜು, ಶಿವಪುರ ನಿಂಗಯ್ಯ, ಮುಖಂಡರಾದ ಶಿವರಾಜು, ಕಾಂತರಾಜು, ಮದ್ದೂರು ಮಹದೇವು, ವಸಂತಮ್ಮ, ನಂದಿನಿ, ಶಿವಮಾದು, ಶಿವರಾಜ್, ನಾಗೇಶ್, ಕಿರಣ್, ರಘುಪತಿ, ಕಾಂತರಾಜು, ಲೋಕೇಶ್, ಪುರುಷೋತ್ತಮ್, ವರ್ಷನ್, ಮಹೇಶ್, ಭರತ್, ಹೇಮಂತ್, ಮಂಜೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.