ADVERTISEMENT

ಮೃತದೇಹ ಬೀದಿಯಲ್ಲಿಟ್ಟು ಪ್ರತಿಭಟನೆ

ಮರಳಿಗ ಗ್ರಾಮ: ಅಕ್ರಮ ಇ–ಖಾತಾ ಸರಿಪಡಿಸಲು ಕುಟುಂಬಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 3:21 IST
Last Updated 10 ಡಿಸೆಂಬರ್ 2025, 3:21 IST
ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ಮರಳಿಗ ಗ್ರಾಮದಲ್ಲಿ ಮಂಗಳವಾರ ಮೃತ ಗ್ರಾಮ ಸಹಾಯಕ ವೆಂಕಟೇಶ್ ಅವರ ಕುಟುಂಬದ ಸದಸ್ಯರಿಗೆ ತಾಪಂ ಇಒ ರಾಮಲಿಂಗಯ್ಯ ಕರ ನಿರ್ಧರಣಾ ಪತ್ರವನ್ನು ವಿತರಿಸಿದರು. ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ, ಗ್ರಾ.ಪಂ ಅಧ್ಯಕ್ಷೆ ಸುನೀತಾ ಶ್ರೀನಿವಾಸ್, ಮುಖಂಡ ಮರಳಿಗ ಶಿವರಾಜು ಹಾಜರಿದ್ದರು
ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ಮರಳಿಗ ಗ್ರಾಮದಲ್ಲಿ ಮಂಗಳವಾರ ಮೃತ ಗ್ರಾಮ ಸಹಾಯಕ ವೆಂಕಟೇಶ್ ಅವರ ಕುಟುಂಬದ ಸದಸ್ಯರಿಗೆ ತಾಪಂ ಇಒ ರಾಮಲಿಂಗಯ್ಯ ಕರ ನಿರ್ಧರಣಾ ಪತ್ರವನ್ನು ವಿತರಿಸಿದರು. ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ, ಗ್ರಾ.ಪಂ ಅಧ್ಯಕ್ಷೆ ಸುನೀತಾ ಶ್ರೀನಿವಾಸ್, ಮುಖಂಡ ಮರಳಿಗ ಶಿವರಾಜು ಹಾಜರಿದ್ದರು   

ಮದ್ದೂರು: ಅನಾರೋಗ್ಯದಿಂದ ಮೃತಪಟ್ಟ ಗ್ರಾಮ ಸಹಾಯಕನ ಮೃತದೇಹವನ್ನು ಬೀದಿಯಲ್ಲಿಟ್ಟು, ಅಕ್ರಮ ಇ–ಖಾತಾದಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಅವರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ತಾಲ್ಲೂಕಿನ ಕೊಪ್ಪ ಹೋಬಳಿಯ ಮರಳಿಗ ಗ್ರಾಮದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. 

ಮರಳಿಗ ಗ್ರಾಮದ ಗ್ರಾಮ ಸಹಾಯಕ ವೆಂಕಟೇಶ್ (58) ಸೋಮವಾರ ರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದರು.

ಈ ವೇಳೆ ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಗ್ರಾಮಸಭೆಯು ನಡೆಯುತ್ತಿದ್ದ ಗ್ರಾಮ ಪಂಚಾಯತಿ ಆವರಣಕ್ಕೆ ವೆಂಕಟೇಶ್ ಮೃತದೇಹವನ್ನು ತಂದು ಪ್ರತಿಭಟನೆ ನಡೆಸಲು ಮುಂದಾದರು. ವಿಷಯ ತಿಳಿದ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಮಲಿಂಗಯ್ಯ, ಸಿಪಿಐ ನವೀನ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು.

ADVERTISEMENT

ಈ ವೇಳೆ ಅಕ್ರಮ ಖಾತೆಯನ್ನು ರದ್ದುಪಡಿಸಿ ಮೃತ ವೆಂಕಟೇಶ್ ಕುಟುಂಬಕ್ಕೆ ವಾಸದ ಸ್ಥಳವನ್ನು ಖಾತೆ ಮಾಡಿಕೊಡಬೇಕೆಂದು ಆಗ್ರಹಿಸಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಇಒ ರಾಮಲಿಂಗಯ್ಯ ಮಾತನಾಡಿ, ‘ಹಿಂದೆ ಆಗಿರುವ ಖಾತೆಗಳು ನಿಯಾಮನುಸಾರ ಆಗಿರದ ಕಾರಣ ಅವುಗಳನ್ನು ರದ್ದುಪಡಿಸಲಾಗಿದೆ. ಹೀಗಾಗಿ ಗ್ರಾಮ ಸಹಾಯಕ ವೆಂಕಟೇಶ್ ಅವರ ಕುಟುಂಬಕ್ಕೆ ಇ– ಖಾತಾ ಪತ್ರವನ್ನು ನೀಡುತ್ತಿದ್ದೇವೆ’ ಎಂದರು. 

ಘಟನೆಯ ಹಿನ್ನೆಲೆ:

ವೆಂಕಟೇಶ್ ಅವರ ವಾಸದ ಸ್ಥಳವನ್ನು ಕೆಲವು ತಿಂಗಳ ಹಿಂದೆ ಗ್ರಾ.ಪಂ.ನಲ್ಲಿ ಪಿಡಿಒ ಆಗಿದ್ದವರು ನಿವೃತ್ತಿ ಹೊಂದುವ ಸಮಯದಲ್ಲಿ ಅಕ್ರಮವಾಗಿ ಬೇರೆಯವರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದರು ಎಂದು ಸ್ಥಳೀಯರು ಹಿಂದಿನಿಂದಲೂ ಆರೋಪಿಸಿದ್ದರು. ಅಷ್ಟೇ ಅಲ್ಲದೇ ಇದೇ ರೀತಿ ಹಲವಾರು ಗ್ರಾಮಸ್ಥರ ನಿವೇಶನಗಳನ್ನು ಅಕ್ರಮವಾಗಿ ಬೇರೆಯವರ ಹೆಸರಿಗೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. 

ಆನಂತರದ ದಿನಗಳಲ್ಲಿ ಇದು ಗ್ರಾಮ ವ್ಯಾಪ್ತಿಯಲ್ಲಿ ಚರ್ಚೆಗೆ ಒಳಪಟ್ಟಿತ್ತು, ಮಂಗಳವಾರ ಗ್ರಾಮ ಸಹಾಯಕ ವೆಂಕಟೇಶ್ ಮೃತಪಟ್ಟ ದಿನವೇ ಗ್ರಾ.ಪಂ. ಆವರಣದಲ್ಲಿ ಗ್ರಾಮಸಭೆಯೂ ನಡೆಯುತ್ತಿತ್ತು.

ಘಟನೆಯಿಂದ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ ಮದ್ದೂರು ನಗರ ವೃತ್ತ ನಿರೀಕ್ಷಕ ಎಚ್.ಎಸ್.ನವೀನ ನೇತೃತ್ವದಲ್ಲಿ ಬಂದೋಬಸ್ತ್‌ ಒದಗಿಸಲಾಗಿತ್ತು. ಕಂದಾಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದರು. 

ಪ್ರತಿಭಟನೆಯಲ್ಲಿ ಮುಖಂಡರಾದ ಜಿ.ಪಂ. ಮಾಜಿ ಸದಸ್ಯ ಜವಹರ್‌ ಲಾಲ್‌ ಹಾಗೂ ದಲಿತ ಮುಖಂಡ ಮರಳಿಗ ಶಿವರಾಜ್‌, ವೆಂಕಟೇಶ್‌, ಯತೀಶಕುಮಾರ್‌, ಪುಟ್ಟಸ್ವಾಮಿ, ಶಿವಲಿಂಗೇಗೌಡ, ರಂಜಿತ, ಹರೀಶ್, ದಾಸಯ್ಯ, ಲೋಕೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.