ADVERTISEMENT

ಗಂಗಾಮತಸ್ಥರ ಪ್ರತಿಭಟನೆ

ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿರುವುದಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 4:48 IST
Last Updated 14 ಅಕ್ಟೋಬರ್ 2025, 4:48 IST
ಕಲಬುರಗಿ ಜಿಲ್ಲೆ ಶಹಾಬಾದ್‌ ತಾಲ್ಲೂಕಿನ ಮುತಗಾ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಅವರ ಮೂರ್ತಿಯನ್ನು ಭಗ್ನಗೊಳಿಸಿರುವ ಘಟನೆಯನ್ನು ಖಂಡಿಸಿ ಗಂಗಾಮತಸ್ಥರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಸೋಮವಾರ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು
ಕಲಬುರಗಿ ಜಿಲ್ಲೆ ಶಹಾಬಾದ್‌ ತಾಲ್ಲೂಕಿನ ಮುತಗಾ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಅವರ ಮೂರ್ತಿಯನ್ನು ಭಗ್ನಗೊಳಿಸಿರುವ ಘಟನೆಯನ್ನು ಖಂಡಿಸಿ ಗಂಗಾಮತಸ್ಥರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಸೋಮವಾರ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು   

ಶ್ರೀರಂಗಪಟ್ಟಣ: ಕಲಬುರಗಿ ಜಿಲ್ಲೆ ಶಹಾಬಾದ್‌ ತಾಲ್ಲೂಕಿನ ಮುತಗಾ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಅವರ ಮೂರ್ತಿಯನ್ನು ಭಗ್ನಗೊಳಿಸಿರುವ ಘಟನೆಯನ್ನು ಖಂಡಿಸಿ ಗಂಗಾಮತಸ್ಥರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಬೆಂಗಳೂರು– ಮೈಸೂರು ಹೆದ್ದಾರಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ದುಷ್ಕರ್ಮಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕುವೆಂಪು ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ದುಷ್ಕರ್ಮಿಗಳ ವಿರುದ್ಧ ಘೋಷಣೆ ಕೂಗಿದರು.

‘ಮುತಗಾ ಗ್ರಾಮ ಕೋಮು ಸೌಹಾರ್ದಕ್ಕೆ ಹೆಸರಾದ ಊರು. ಅಲ್ಲಿನ ಜನರು ಗಂಗಾಮತಸ್ಥರ ಕುಲಗುರು ನಿಜ ಶರಣ ಅಂಬಿಗರ ಚೌಡಯ್ಯ ಅವರ ಮೂರ್ತಿಯನ್ನು ದೇವರ ಪ್ರತಿರೂಪ ಎಂದೇ ಭಾವಿಸಿದ್ದರು. ಬಸವಣ್ಣನವರ ಅನುಯಾಯಿಯಾಗಿದ್ದ ಅಂಬಿಗರ ಚೌಡಯ್ಯ ಅವರ ವಚನಗಳು ನಾಡಿನೆಲ್ಲೆಡೆ ಪ್ರಸಿದ್ಧ ಪಡೆದಿವೆ. ವರ್ಗ, ವರ್ಣ, ಲಿಂಗ ಸಮಾನತೆಯನ್ನು ಸಾರುವ ವಚನಗಳನ್ನು ಅವರು ರಚಿಸಿದ್ದಾರೆ. ಅಂತಹ ಮಹಾನ್‌ ವ್ಯಕ್ತಿಯ ಮೂರ್ತಿಯನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವುದು ಮಾನವ ಕುಲಕ್ಕೆ ಮಾಡಿದ ಅಪಮಾನ. ದುಷ್ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ಶೀಘ್ರ ಬಂಧಿಸಿ ತಕ್ಕ ಶಿಕ್ಷೆ ವಿಧಿಸಬೇಕು. ಅಂಬಿಗರ ಚೌಡಯ್ಯ ಅವರ ಮೂರ್ತಿಯನ್ನು ಪುನರ್‌ ಪ್ರತಿಷ್ಠಾಪಿಸಬೇಕು’ ಎಂದು ಗಂಗಾ ಮತಸ್ಥರ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಟಿ. ಬಾಲರಾಜು ಆಗ್ರಹಿಸಿದರು.

ADVERTISEMENT

ಸಂಘದ ಗೌರವಾಧ್ಯಕ್ಷ ಕೆಆರ್‌ಎಸ್‌ ತಮ್ಮಣ್ಣ, ಉಪಾಧ್ಯಕ್ಷ ದೇವರಾಜು, ಖಜಾಂಚಿ ಹಾಲಪ್ಪ ಮಾತನಾಡಿದರು. ಪುರಸಭೆ ಸದಸ್ಯರಾದ ಗಂಜಾಂ ಶಿವು, ಎಸ್‌.ಟಿ. ರಾಜು, ಮುಖಂಡರಾದ ನಾರಾಯಣಪ್ಪ, ಗಾಮನಹಳ್ಳಿ ಪ್ರಕಾಶ್, ಮೇಳಾಪುರ ಭಕ್ತವತ್ಸಲ, ಟಿಎಪಿಸಿಎಂಎಸ್‌ ನಿರ್ದೇಶಕ ಬಸ್ತಿಪುರ ನಾಗರಾಜು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಾಲ್ಲೂಕು ಆಡಳಿತದ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.