ADVERTISEMENT

ಸರ್ಕಾರದ ಸವಲತ್ತು ತಲುಪಿಸಿ: ಸಚಿವ ಕೆ.ಸಿ.ನಾರಾಯಣಗೌಡ

ಹರಿಹರಪುರದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 4:40 IST
Last Updated 21 ಫೆಬ್ರುವರಿ 2022, 4:40 IST
ಕೆ.ಆರ್.ಪೇಟೆ ತಾಲ್ಲೂಕಿನ ಹರಿಹರಪುರದಲ್ಲಿ ಭಾನುವಾರ ನಡೆದ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮವನ್ನು ಸಚಿವ ನಾರಾಯಣಗೌಡ ಉದ್ಘಾಟಿಸಿದರು. ಅಶ್ವತಿ, ರೂಪಾ, ಶಿವಾನಂದಮೂರ್ತಿ ಇದ್ದರು
ಕೆ.ಆರ್.ಪೇಟೆ ತಾಲ್ಲೂಕಿನ ಹರಿಹರಪುರದಲ್ಲಿ ಭಾನುವಾರ ನಡೆದ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮವನ್ನು ಸಚಿವ ನಾರಾಯಣಗೌಡ ಉದ್ಘಾಟಿಸಿದರು. ಅಶ್ವತಿ, ರೂಪಾ, ಶಿವಾನಂದಮೂರ್ತಿ ಇದ್ದರು   

ಕೆ.ಆರ್.ಪೇಟೆ: ಸರ್ಕಾರದ ವಿವಿಧ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಸರ್ಕಾರಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸ ಬೇಕು ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ತಾಲ್ಲೂಕಿನ ಹರಿಹರಪುರದಲ್ಲಿ ಭಾನುವಾರ ನಡೆದ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಗ್ರಾಮಮಟ್ಟದಲ್ಲಿ ವಿವಿಧ ಇಲಾಖೆಯ ಯೋಜನೆಗಳಿಗೆ ಆಯ್ಕೆ ಮಾಡಿದ್ದ ಫಲಾನುಭವಿಗಳಿಗೆ ವಿವಿಧ ಯೋಜನೆ ಗಳ ಸವಲತ್ತು ವಿತರಿಸಿ ಅವರು ಮಾತನಾಡಿದರು.

ಹರಿಹರಪುರದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಜನರ ಸಮಸ್ಯೆ ಆಲಿಸಿ, ಪರಿಹಾರ ಒದಗಿಸಿದ್ದಾರೆ. ತಾಲ್ಲೂಕಿನಾದ್ಯಂತ ಉಚಿತವಾಗಿ ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿಕೊಡಲಾಗುತ್ತಿದೆ ಎಂದರು.

ADVERTISEMENT

ಜಲ ಜೀವನ್ ಮಿಷನ್ ಕಾರ್ಯಕ್ರಮವನ್ನು ತಾಲ್ಲೂಕಿನಲ್ಲಿ ಜಾರಿ ಮಾಡಲಾಗಿದೆ. ಬೂಕನಕೆರೆ, ಶೀಳನೆರೆ, ಸಂತೇಬಾಚಹಳ್ಳಿ, ಅಕ್ಕಿಹೆಬ್ಬಾಳು ಹೋಬಳಿಯ ಕೆರೆ- ಕಟ್ಟೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.

ಸಚಿವರು ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನ, ಆರ್‌ಟಿಸಿ ತಿದ್ದುಪಡಿ, ಉದ್ಯೋಗ ಖಾತ್ರಿ ಯೋಜನೆ, ಮತದಾನದ ಗುರುತಿನ ಚೀಟಿ, ಭಾಗ್ಯಲಕ್ಷ್ಮಿ ಬಾಂಡ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಸವಲತ್ತುಗಳ ಆದೇಶ ಪತ್ರ ವಿತರಿಸಿದರು. ಪೋಷಣ್ ಅಭಿಯಾನದಡಿ ಮೂವರಿಗೆ ಸೀಮಂತ ನೆರವೇರಿಸಲಾಯಿತು.

ಶನಿವಾರ ರಾತ್ರಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗ್ರಾಮಸ್ಥರೊಂದಿಗೆ ಕುಂದುಕೊರತೆ ಆಲಿಸಿದರು.

ಹರಿಹರಪುರ ಗ್ರಾಮವು ಸ್ಥಳಾಂತರ ಗೊಂಡಿರುವ ಗ್ರಾಮವಾಗಿರುವು ದರಿಂದ ಗ್ರಾಮದ ಜಮೀನಿನ ಸಮಸ್ಯೆ, ನಿವೇಶನಗಳ ಇ-ಸ್ವತ್ತಿನ ಸಮಸ್ಯೆ, ಪೋಡಿ ಹಾಗೂ ಖಾತೆಯ ಸಮಸ್ಯೆಗಳಿವೆ. ಇವುಗಳನ್ನು ಪರಿಹರಿಸಿಕೊಡಲು ಸಂಬಧಂಸಿದವರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದರು.

ಮೂಲ ಗ್ರಾಮದಲ್ಲಿರುವ ಹರಿಹರೇಶ್ವರ ಮೂರ್ತಿಯನ್ನು ಗ್ರಾಮಕ್ಕೆ ಸ್ಥಳಾಂತರಿಸಲು ಅವಕಾಶ ಮಾಡಿಕೊಡಬೇಕೆಂಬ ಮನವಿಯ ಬಗ್ಗೆ ಪುರಾತತ್ವ ಇಲಾಖೆಯವರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಹರಿಹರಪುರ ವೃತ್ತದಲ್ಲಿ ಗ್ರಾಮಲೆಕ್ಕಾಧಿಕಾರಿ ಕಚೇರಿ ತೆರೆದು ಕೆಲಸ ಮಾಡಲು ನಿರ್ದೇಶನ ನೀಡಲಾಗುವುದು ಎಂದರು.

ಪಾಂಡವಪುರ ಉಪವಿಭಾ ಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಎಂ.ವಿ.ರೂಪಾ ಮಾತನಾಡಿದರು.

ಹರಿಹರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಸಿಇಒ ದಿವ್ಯಪ್ರಭು, ಉಪ ತಹಶೀಲ್ದಾರ್ ಲಕ್ಷ್ಮೀಕಾಂತ್, ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ್, ಡಿಡಿಪಿಯು ಜವರೇಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂಧನ್, ನಾಗಮಂಗಲ ಡಿವೈಎಸ್‌ಪಿ ನವೀನ್, ಪೊಲೀಸ್ ಇನ್‌ಸ್ಪೆಕ್ಟರ್‌ ನಿರಂಜನ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಂಬರೀಶ್, ಪುರಸಭೆ ಸದಸ್ಯ ಕೆ.ಆರ್.ನೀಲಕಂಠ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಪಾಪಣ್ಣಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.