ಪಾಂಡವಪುರ: ಸಮರ್ಪಕ ಮಾಹಿತಿ ನೀಡುತ್ತಿಲ್ಲ, ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ಜನರು ತಾಲ್ಲೂಕಿನ ಚಿಕ್ಕಾಡೆ ಪಂಚಾಯಿತಿ ಪಿಡಿಒ ಪ್ರಮೋದ ಅವರನ್ನು ತರಾಟೆಗೆ ತೆಗೆದುಕೊಂಡರು.
ತಾಲ್ಲೂಕಿನ ಚಿಕ್ಕಾಡೆ ಪಂಚಾಯಿತಿ ಕಚೇರಿ ಆವರಣದಲ್ಲಿ ತಾ.ಪಂ. ಇಒ ವೀಣಾ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ‘ಜಮಾಬಂದಿ’ ಕಾರ್ಯಕ್ರಮದಲ್ಲಿ ಪಿಡಿಒ ವಿರುದ್ಧ ಜನರು ಹರಿಹಾಯ್ದರು.
ಜಮಾಬಂದಿಯ 2ನೇ ಸಭೆಗೂ ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲ. ಪಂಚಾಯಿತಿಗೆ ಖರೀದಿ ಮಾಡುವ ಸಾಮಗ್ರಿಗಳಿಗೆ ಸಮರ್ಪಕವಾದ ಲೆಕ್ಕಪತ್ರ ಇಟ್ಟಿಲ್ಲ. ಜನರು ತಮ್ಮ ಆಸ್ತಿಗೆ ಸಂಬಂಧಪಟ್ಟಂತೆ ಖಾತೆ ಮಾಡಿಕೊಡಲು ಮನವಿ ನೀಡಿದ್ದರೂ ಕ್ರಮವಹಿಸಿಲ್ಲ. ನಾವು ಪಂಚಾಯಿತಿಗೆ ಅಲೆದಾಡಬೇಕಿದೆ. ಜಲಜೀವನ್ ಮಿಷನ್ ಯೋಜನೆಯಲ್ಲಿ ಕಳಪೆ ಕಾಮಗಾರಿ ನಡೆದಿದೆ. ಕುಡಿಯುವ ನೀರಿನ ಟ್ಯಾಂಕ್ ಉಪಯೋಗಕ್ಕೆ ಬರುತ್ತಿಲ್ಲ. ಇದನ್ನು ಸರಪಡಿಸಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ಜಗದೀಶ್, ಸಿ.ಬಿ.ಮಂಜುನಾಥ್, ಅಂದಾನಿ, ಮೋಹನ್ ಕುಮಾರ್, ಸಿ.ಪಿ.ಅನಿಲ್, ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಪಿಡಿಒ ಪ್ರಮೋದ್ ಅವರು ಜಮಾಬಂದಿ ಸಭೆಗೆ ಸಾರ್ವಜನಿಕವಾಗಿ ಮಾಹಿತಿ ಮತ್ತು ಪ್ರಚಾರ ಮಾಡಿಲ್ಲ. ಹಾಗಾಗಿ ಸಭೆನು ಮುಂದೂಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಹೀಗಾಗಿ ತಾ.ಪಂ. ಇಒ ವೀಣಾ ಅವರು ಜಮಾಬಂದಿ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಮುಂದೂಡಿದರು.
ಅಧ್ಯಕ್ಷೆ ಅಕ್ಷತಾ, ಉಪಾಧ್ಯಕ್ಷೆ ದೇವಮ್ಮ, ಸದಸ್ಯರಾದ ಚಂದ್ರಶೇಖರ್, ಮೋಹನ್, ಅವಿನಾಶ್, ಆನಂದ್, ಅರ್ಜುನ್, ಮಹದೇವಣ್ಣ, ಅನಿತಾ, ಮಂಗಳಮ್ಮ, ಶೋಭಾ ಕಾರ್ಯದರ್ಶಿ ಶಿವಣ್ಣ ಹಾಗೂ ಗ್ರಾಮದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.