ADVERTISEMENT

ಮಂಡ್ಯ ಜಿಲ್ಲೆ: ಕ್ಯಾಮೆರಾ ಕಣ್ಗಾವಲಿನಲ್ಲಿ ಪಿಯು ಪರೀಕ್ಷೆ

ಇಂದಿನಿಂದ ಮಾರ್ಚ್‌ 17ರವರೆಗೆ ಪರೀಕ್ಷೆ: ಮಂಡ್ಯ ಜಿಲ್ಲೆಯಲ್ಲಿ 14,187 ಪರೀಕ್ಷಾರ್ಥಿಗಳು

ಸಿದ್ದು ಆರ್.ಜಿ.ಹಳ್ಳಿ
Published 28 ಫೆಬ್ರುವರಿ 2026, 3:16 IST
Last Updated 28 ಫೆಬ್ರುವರಿ 2026, 3:16 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಮಂಡ್ಯ: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆ.28ರಿಂದ (ಇಂದಿನಿಂದ) ಮಾರ್ಚ್‌ 17ರವರೆಗೆ ಬೆಳ್ಳಿಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೂ ನಡೆಯಲಿವೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. 

ದ್ವಿತೀಯ ಪಿಯುಸಿ ಪರೀಕ್ಷೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯಲಿದ್ದು ಒಟ್ಟು 580ಕ್ಕೂ ಹೆಚ್ಚು ಕ್ಯಾಮೆರಾಗಳನ್ನು 27 ಪರೀಕ್ಷಾ ಕೇಂದ್ರಗಳಿಗೆ ಈಗಾಗಲೇ ಅಳವಡಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯ ವಿಡಿಯೊ ಕಾನ್ಫರೆನ್ಸ್‌ ಕೊಠಡಿಯಲ್ಲಿ ಸಿಸಿಟಿವಿ ದೃಶ್ಯಾವಳಿ ವೀಕ್ಷಣೆಗೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರನ್ನು ಒಳಗೊಂಡಂತೆ 9 ಮಂದಿಯ ತಂಡವನ್ನು ನಿಯೋಜಿಸಲಾಗಿದೆ. 

ಪ್ರಸಕ್ತ ವರ್ಷದ ಪರೀಕ್ಷೆಯಲ್ಲಿ ಒಟ್ಟು 14,187 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲು ಅಣಿಯಾಗಿದ್ದಾರೆ. 1096 ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯಲಿದ್ದಾರೆ. 12,694 ವಿದ್ಯಾರ್ಥಿಗಳು ಕನ್ನಡ ಭಾಷಾ ವಿಷಯ ಮತ್ತು 13,284 ವಿದ್ಯಾರ್ಥಿಗಳು ಇಂಗ್ಲಿಷ್‌ ಭಾಷಾ ವಿಷಯದ ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಇರುವುದಿಲ್ಲ. 

ADVERTISEMENT

ಸಕಲ ಸಿದ್ಧತೆ

ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ಸೌಲಭ್ಯ ಮತ್ತು ಭದ್ರತೆಗೆ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ವಿಶೇಷ ಜಾಗೃತ ದಳದ ಸಿಬ್ಬಂದಿ ಇರುತ್ತಾರೆ. ಜೊತೆಗೆ ಪ್ರಶ್ನೆಪತ್ರಿಕೆ ಪಾಲಕರೂ ಇರುತ್ತಾರೆ. ಡಿಡಿಪಿಯು ತಂಡ ಸೇರಿದಂತೆ ಒಟ್ಟು 5 ಜಾಗೃತದಳಗಳು ಜಿಲ್ಲೆಯಾದ್ಯಂತ ಇರುವ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ ಎಂದು ಡಿಡಿಪಿಯು ಸಿ.ಚಲುವಯ್ಯ ತಿಳಿಸಿದರು. 

ಪ್ರಶ್ನೆ ಪತ್ರಿಕೆಗಳ ವಿತರಣೆಗಾಗಿ 9 ಮಾರ್ಗಗಳನ್ನು ನಿಗದಿಪಡಿಸಿದ್ದು, ಪ್ರತಿ ಮಾರ್ಗಕ್ಕೂ ಪ್ರಶ್ನೆಪತ್ರಿಕೆ ವಿತರಣಾಧಿಕಾರಿಗಳನ್ನು ನೇಮಿಸಲಾಗಿದೆ. ಒಂದೊಂದು ಮಾರ್ಗಕ್ಕೆ ಮೂವರು ಸದಸ್ಯರ ಸಮಿತಿ ನೇಮಿಸಲಾಗಿದೆ. ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ನಾನಾ ಕಾಲೇಜುಗಳ ಪ್ರಾಂಶುಪಾಲರು ಪ್ರಶ್ನೆಪತ್ರಿಕೆ ವಿತರಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇವರಿಗೆ ಅಗತ್ಯವಿರುವ ವಾಹನಗಳನ್ನು ಒದಗಿಸಲಾಗಿದೆ ಎಂದು ಡಿಡಿಪಿಯು ತಿಳಿಸಿದರು. 

ಟಾಪ್‌ 10 ನಿರೀಕ್ಷೆ

2023–24ರಲ್ಲಿ ಮಂಡ್ಯ ಜಿಲ್ಲೆಯು ಶೇ 81.35ರಷ್ಟು ಫಲಿತಾಂಶ ಪಡೆದು, 24ನೇ ಸ್ಥಾನ ಗಳಿಸಿತ್ತು. 2024–25ರಲ್ಲಿ ಶೇ 73.26 ಫಲಿತಾಂಶ ಗಳಿಸಿ, 14ನೇ ಸ್ಥಾನಕ್ಕೆ, ಅಂದರೆ 10 ಸ್ಥಾನ ಮೇಲಕ್ಕೆ ಜಿಗಿದಿತ್ತು. ಈ ಬಾರಿ ಟಾಪ್‌ 10 ಸ್ಥಾನದೊಳಗೆ ಮಂಡ್ಯ ಜಿಲ್ಲೆ ಬರುವ ನಿರೀಕ್ಷೆಯಿದೆ ಎಂದು ಪ್ರಾಂಶುಪಾಲರು ತಿಳಿಸಿದರು. 

‘ಮೊಬೈಲ್‌ ಸ್ಮಾರ್ಟ್‌ ಡಿವೈಸ್‌ ನಿಷಿದ್ಧ’

‘ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಸ್ಮಾರ್ಟ್ ಡಿವೈಸ್ ಗಳನ್ನು ಕೊಠಡಿಗೆ ತರುವಂತಿಲ್ಲ. ಪರೀಕ್ಷೆ ಮೇಲ್ವಿಚಾರಣೆಗೆ ನೇಮಿಸಿರುವ ಶಿಕ್ಷಕರು ಮಾರ್ಗಸೂಚಿಗೆ ಬದ್ಧರಾಗಿ ಕರ್ತವ್ಯ ಪಾಲಿಸಬೇಕು. ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಚಿತ್ರೀಕರಣ ಮಾಡಲು ಯಾರಿಗೂ ಅನುಮತಿ ನೀಡಬಾರದು’ ಎಂದು ಜಿಲ್ಲಾಧಿಕಾರಿ ಕುಮಾರ ಸೂಚಿಸಿದ್ದಾರೆ. ಪರೀಕ್ಷೆ ಸಮಯದಲ್ಲಿ ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಜೆರಾಕ್ಸ್ ಹಾಗೂ ಸೈಬರ್ ಕೇಂದ್ರಗಳನ್ನು ಮುಚ್ಚಲು ಆದೇಶಿಸಲಾಗಿದೆ. ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಯನ್ನು ತ್ರಿಸದಸ್ಯ ಸಮಿತಿಯಿಂದ ದೂರದ ಪರೀಕ್ಷಾ ಕೇಂದ್ರಗಳಾದ ಕೆ.ಆರ್. ಪೇಟೆ ನಾಗಮಂಗಲ ಪಾಂಡವಪುರಕ್ಕೆ ಮುಂಚಿತವಾಗಿ ತಲುಪಿಸಲಾಗುತ್ತದೆ. ಪ್ರಶ್ನೆ ಪತ್ರಿಕೆಯನ್ನು ಸಾಗಿಸುವಾಗ ಬಿಗಿ ಭದ್ರತೆಯನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. 

‘ಸುಳ್ಳು ವದಂತಿಗೆ ಕಿವಿಗೊಡಬೇಡಿ’

‘ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ವದಂತಿಗಳಿಗೆ ವಿದ್ಯಾರ್ಥಿಗಳು ಕಿವಿಗೊಡಬಾರದು. ಪ್ರಶ್ನೆಪತ್ರಿಕೆಗಳು ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ಸುರಕ್ಷಿತವಾಗಿವೆ. ಪಾರದರ್ಶಕ ಮತ್ತು ನ್ಯಾಯಸಮ್ಮತವಾದ ಪರೀಕ್ಷೆ ನಡೆಸಲು ಡಿಸಿ ಸಿಇಒ ಮತ್ತು ಎಸ್‌ಪಿ ಅವರ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಡಿಡಿಪಿಯ ಸಿ.ಚಲುವಯ್ಯ ತಿಳಿಸಿದರು. ‌ ‘ಆನ್‌ಲೈನ್‌ ತರಬೇತಿ ವಿಷಯವಾರು ತರಬೇತಿ ಮಾದರಿ ಪ್ರಶ್ನೆಪತ್ರಿಕೆಗಳ ಬಿಡಿಸುವುದು ಪ್ರಶ್ನೆಕೋಟಿ ಕಲಿಕೆಯಲ್ಲಿ ಹಿಂದುಳಿದವರಿಗಾಗಿ ವಿಶೇಷ ತರಗತಿ ಎರಡು ಪೂರ್ವಸಿದ್ಧತಾ ಪರೀಕ್ಷೆಗಳು ಸೇರಿದಂತೆ ಫಲಿತಾಂಶ ವೃದ್ಧಿಗೆ ವಿಶೇಷ ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.