ADVERTISEMENT

ಬಡ್ತಿಯನ್ನೇ ಕಾಣದ ಪಿಯು ಉಪನ್ಯಾಸಕರು

ನೇಮಕಗೊಂಡ ಹುದ್ದೆಯಲ್ಲೇ ನಿವೃತ್ತಿ, ದಶಕದ ಹೋರಾಟಕ್ಕೆ ಸಿಗದ ನ್ಯಾಯ

ಎಂ.ಎನ್.ಯೋಗೇಶ್‌
Published 19 ಜೂನ್ 2019, 19:30 IST
Last Updated 19 ಜೂನ್ 2019, 19:30 IST
ಮಂಡ್ಯದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಸಾಂದರ್ಭಿಕ ಚಿತ್ರ)
ಮಂಡ್ಯದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಸಾಂದರ್ಭಿಕ ಚಿತ್ರ)   

ಮಂಡ್ಯ: ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ), ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ–ಸೆಟ್‌)ಯಲ್ಲಿ ಉತ್ತೀರ್ಣರಾಗಿ ಪಿಎಚ್‌ಡಿ ಪದವಿ ಪಡೆದಿದ್ದರೂ, ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿರುವ ಸಾವಿರಕ್ಕೂ ಹೆಚ್ಚು ಉಪನ್ಯಾಸಕರು ಪದೋನ್ನತಿ ಇಲ್ಲದೇ ನಿವೃತ್ತರಾಗುತ್ತಿದ್ದಾರೆ.

ಅರ್ಹತೆ ಇದ್ದರೂ ಪದವಿಪೂರ್ವ ಕಾಲೇಜು ಹಂತದಿಂದ ತಮಗೆ ಮುಂದೆ ಹೋಗಲು ಸಾಧ್ಯವಾಗುತ್ತಿಲ್ಲ, ಅವರ ಜ್ಞಾನ ನಿಂತ ನೀರಾಗಿಯೇ ಉಳಿದಿದೆ. ಈ ಉಪನ್ಯಾಸಕರು 10 ವರ್ಷಗಳಿಂದ ಉನ್ನತ ಅವಕಾಶಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಅವರಿಗೆ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ.

‘ಅರ್ಹತೆ ಆಧಾರದ ಮೇಲೆ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬ ವಿಶ್ವವಿದ್ಯಾಲಯ ಪ್ರಾಧ್ಯಾಪಕನಾಗಿ ನಿವೃತ್ತಿ ಹೊಂದಲು ಅವಕಾಶವಿದೆ. ಆದರೆ, ರಾಜ್ಯದಲ್ಲಿ ಪಿಯು ಉಪನ್ಯಾಸಕರು ಉಪನ್ಯಾಸಕರಾಗಿಯೇ ಉಳಿಯಬೇಕಾಗಿದೆ’ ಎಂದು ಬಡ್ತಿ ವಂಚಿತ ಉಪನ್ಯಾಸಕರು ಹೇಳುತ್ತಾರೆ.

ADVERTISEMENT

ಕುಮಾರ್‌ ನಾಯಕ್‌ ನೇತೃತ್ವದ ಸಮಿತಿಯು, ಆಂಧ್ರಪ್ರದೇಶ ಮಾದರಿಯಲ್ಲಿ ಅರ್ಹತೆ ಆಧಾರದ ಮೇಲೆ ಪಿಯು ಉಪನ್ಯಾಸಕರನ್ನು ಪದವಿ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರಾಗಿ ಪದೋನ್ನತಿಗೊಳಿಸಬೇಕು ಎಂದು ಶಿಫಾರಸು ಮಾಡಿತ್ತು. 2011ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್‌, ಪಿಯು ಉಪನ್ಯಾಸಕರನ್ನು ಬಡ್ತಿಗೆ ಪರಿಗಣಿಸುವಂತೆ ಆದೇಶ ನೀಡಿದೆ. ಜಗದೀಶ ಶೆಟ್ಟರ್‌, ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಹುದ್ದೆ ಮೀಸಲಾತಿಯನ್ನಾದರೂ ಕೊಡಿ:

2014ರಿಂದ ವೃಂದ ಮತ್ತು ನೇಮಕಾತಿ ಅಧಿಸೂಚನೆ ಪ್ರಕಾರ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ನಡೆಸುತ್ತದೆ. ಬೋಧಕೇತರ ವರ್ಗದ ಗ್ರೂಪ್‌ ‘ಸಿ‘ ಸಿಬ್ಬಂದಿ, ಅರ್ಹತೆ ಆಧಾರದ ಮೇಲೆ ಸಹಾಯಕ ಪ್ರಾಧ್ಯಾಪಕರಾಗಿ ಸ್ಥಿತ್ಯಂತರಗೊಳ್ಳುವ ಸಮಯದಲ್ಲಿ ಶೇ 5ರಷ್ಟು ಹುದ್ದೆಗಳನ್ನು ಮೀಸಲಿಡಲಾಗಿದೆ. ಆದರೆ, ಪಿಯು ಉಪನ್ಯಾಸಕರು ಪರೀಕ್ಷೆ ಎದುರಿಸಲು ಸಿದ್ಧರಿದ್ದರೂ ಗ್ರೂಪ್‌ ‘ಸಿ‘ ಮಾದರಿಯಲ್ಲಿ ಇವರಿಗೆ ಹುದ್ದೆಗಳಲ್ಲಿ ಮೀಸಲಾತಿ ನೀಡಿಲ್ಲ.

2018ರಲ್ಲಿ ನಡೆದ ಉನ್ನತ ಶಿಕ್ಷಣ ಪರಿಷತ್‌ ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನಾಗಲಾಂಬಿಕಾ ದೇವಿ, ‘ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅರ್ಹತೆ ಹೊಂದಿದ ಪಿಯು ಉಪನ್ಯಾಸಕರಿಗೆ ಶೇ 5ರಷ್ಟು ಹುದ್ದೆ ಮೀಸಲಿಡಲು ಯಾವುದೇ ಅಭ್ಯಂತರವಿಲ್ಲ’ ಎಂದು ಷರಾ ಬರೆದಿದ್ದರು. ಆದರೆ, ಅದಕ್ಕೆ ಸರ್ಕಾರದಿಂದ ಯಾವುದೇ ಉತ್ತರ ಸಿಕ್ಕಿಲ್ಲ.

‘ಕೂಡಲೇ ಹುದ್ದೆ ಮೀಸಲಾತಿ ನೀಡಬೇಕು. ಜೊತೆಗೆ, ಈಗಿರುವ ನೇಮಕಾತಿ ವಯೋಮಿತಿಯನ್ನು 45ರಿಂದ 50 ವರ್ಷಕ್ಕೆ ಹೆಚ್ಚಿಸಬೇಕು’ ಎಂಬುದು, ರಾಜ್ಯ ಎನ್‌ಇಟಿ, ಕೆ–ಸೆಟ್‌, ಪಿಎಚ್‌.ಡಿ ಅರ್ಹತೆಯುಳ್ಳ ಸರ್ಕಾರಿ ಪದವಿಪೂರ್ವ ಕಾಲೇಜುಗಳ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಎಂ.ಎಲ್‌.ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎಸ್‌.ಪುರುಷೋತ್ತಮ್‌ ಅವರ ಒತ್ತಾಯ.

ಸಂವಿಧಾನದ 16ನೇ ವಿಧಿ ಉಲ್ಲಂಘನೆ

‘ವಿದ್ಯಾರ್ಥಿಗಳ ಭವಿಷ್ಯ ನಿರ್ಣಯಿಸುವಲ್ಲಿ ಪಿಯು ಉಪನ್ಯಾಸಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಆದರೆ, ಅವರಿಗೆ ಬಡ್ತಿಯನ್ನೇ ನೀಡದೆ ಅವರ ಸಂಶೋಧನಾ ಮನೋಭಾವವನ್ನು ಕುಗ್ಗಿಸಲಾಗುತ್ತಿದೆ. ಇದು ಸಂವಿಧಾನದ 16ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಬಡ್ತಿ ಎಂಬುದು ಸಾಂವಿಧಾನಿಕ ಅವಕಾಶವಾಗಿದೆ’ ಎನ್ನುತ್ತಾರೆ ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಡಾ.ಸುಧಾಕರ್‌ ಹೊಸಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.