
ಮಂಡ್ಯ: ‘ಜಿಲ್ಲೆಯಲ್ಲಿ ಡಿಸೆಂಬರ್ 21ರಿಂದ ನಾಲ್ಕು ದಿನ ಪಲ್ಸ್ ಪೋಲಿಯೊ ಅಭಿಯಾನ ನಡೆಯಲಿದ್ದು, ಸಾರ್ವಜನಿಕರಿಗೆ ಇದರ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಡಿ.21ರಿಂದ 24ರವರೆಗೆ ಹಮ್ಮಿಕೊಳ್ಳಲಾಗಿರುವ ಪಲ್ಸ್ ಪೋಲಿಯೊ ಕಾರ್ಯಕ್ರಮದ ಪೂರ್ವಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದರಿ ಕಾರ್ಯಕ್ರಮದಲ್ಲಿ ಐದು ವರ್ಷ ಒಳಪಟ್ಟ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ಪಲ್ಸ್ ಪೋಲಿಯೊ ಕುರಿತಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಹೆಚ್ಚಿನ ಜನರಿಗೆ ಪಲ್ಸ್ ಪೋಲಿಯೊ ಲಸಿಕ ಕಾರ್ಯಕ್ರಮದ ಕುರಿತು ಮಾಹಿತಿ ಹಾಗೂ ಇದರ ಪ್ರಯೋಜನವನ್ನು ತಿಳಿಸಬೇಕು. ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೇಳಿದರು.
‘ಚಲನಚಿತ್ರ ಮಂದಿರಗಳು ಹಾಗೂ ಎಲ್.ಇ.ಡಿ ಜಾಹೀರಾತು ಪ್ರದರ್ಶನ ಮೂಲಕ ಜ್ಞಾಪಕ ಪ್ರಚಾರ ಕೈಗೊಳ್ಳಿ. ಬಸ್ ನಿಲ್ದಾಣ, ರೈಲ್ವ ನಿಲ್ದಾಣ ಹಾಗೂ ಜನರು ಹೆಚ್ಚು ಸೇರುವ ಜಾಗಗಳಲ್ಲಿ ಲಸಿಕಾ ಬೂತ್ ಗಳನ್ನು ಅಯೋಜಿಸಿ’ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ. ಮೋಹನ್, ಆರ್‌ಸಿಎಚ್ ಅಧಿಕಾರಿ ಡಾ.ಕೆ.ಪಿ ಅಶ್ವತ್ಥ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಹಾಗೂ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ-1 ಶಿವಲಿಂಗಯ್ಯ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ನರಸಿಂಹಮೂರ್ತಿ ಇದ್ದರು.
ಜಿಲ್ಲೆಯಲ್ಲಿ ಐದು ವರ್ಷ ಒಳಪಟ್ಟ ಸುಮಾರು ಒಂದು ಲಕ್ಷದ ಮೂರು ಸಾವಿರ ಮಕ್ಕಳು ಇದ್ದಾರೆ. ಐದು ವರ್ಷ ಒಳಪಟ್ಟ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೊ ಹಾಕಿಸಬೇಕು.– ಕುಮಾರ, ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.