ಮಂಡ್ಯ: ‘ಹಣ ಉಳ್ಳವರು ಅಧಿಕಾರಕ್ಕೆ ಬರುತ್ತಿರುವುದರಿಂದ ಜ್ಞಾನ ಇರುವವರು ಅಧಿಕಾರದಿಂದ ವಂಚಿತರಾಗುತ್ತಿದ್ದಾರೆ, ಇದು ಹೀಗೆ ಮುಂದುವರಿದರೆ ಸಮಾಜದಲ್ಲಿ ಜನರು ಸಮಸ್ಯೆಗಳನ್ನೇ ಎದುರಿಸಬೇಕಾಗುತ್ತದೆ’ ಎಂದು ಆದಿಚುಂಚನಗಿರಿ ಶಾಖಾ ಮಠದ ಕೊಮ್ಮೇರಹಳ್ಳಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ನಗರದ ಹೊರವಲಯದ ಆರ್‌ವಿಎಸ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಕಾಲೇಜಿನ ಸಭಾಂಗಣದಲ್ಲಿ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಭಾನುವಾರ ನಡೆದ ಮಂಡ್ಯ ಜಿಲ್ಲೆಯ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವಿದ್ಯೆ, ಜ್ಞಾನ ಶ್ರೇಷ್ಠವಾದುದು. ಆದರೆ, ಜ್ಞಾನದ ಶಕ್ತಿಗೆ ಬೆಲೆ ಇಲ್ಲದಾಗಿದೆ, ಹಣಕ್ಕೆ ಬೆಲೆ ಬಂದಿದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ವಿದ್ಯಾರ್ಜನೆಗೆ ಒತ್ತು ಕೊಡಬೇಕು. ಮಕ್ಕಳು ಸಂಸ್ಕಾರವಂತರಾಗಿ ಮೌಲ್ಯಯುತ ಗುಣ ಬೆಳೆಸಿಕೊಳ್ಳಬೇಕು. ಇದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಪ್ರಜೆಗಳಾಗಬಹುದು’ ಎಂದು ಸಲಹೆ ನೀಡಿದರು.
ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಮಾತನಾಡಿ, ‘ವಿದ್ಯೆ ಮನುಷ್ಯನಿಗೆ ಮುಖ್ಯ, ವಿದ್ಯಾರ್ಥಿಗಳಾದವರು ನಿರಂತ ಕಲಿಕೆಯಲ್ಲಿ ತೊಡಗಿ ಜ್ಞಾನ ಹೆಚ್ಚಿಸಿಕೊಳ್ಳಬೇಕು. ರೈತ ಕುಟುಂಬದಿಂದ ಬಂದ ಒಕ್ಕಲಿಗ ಸಮುದಾಯದವರು ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ’ ಎಂದು ಶ್ಲಾಘಿಸಿದರು.
ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮದ ವತಿಯಿಂದ ಬಿಇ ಹಾಗೂ ಎಂಬಿಬಿಎಸ್ ಮಾಡುವ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ₹1 ಲಕ್ಷದವರೆಗೂ ಸಾಲ ನೀಡಲಾಗುತ್ತದೆ. ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೆ ₹50 ಲಕ್ಷದವರೆಗೂ ಸಾಲದ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಲಬೇಕು. ನಿರುದ್ಯೋಗ ಯುವಕರಿಗೆ ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನ ಖರೀದಿಗೆ ₹3 ಲಕ್ಷ ಸಾಲ ನೀಡಲು ಅವಕಾಶ ಕಲ್ಪಿಸಲಾಗಿದೆ. ‘ಗಂಗಾ ಕಲ್ಯಾಣ’ ಯೋಜನೆಗೂ ಅವಕಾಶವಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಒಕ್ಕಲಿಗರ ನಿಗಮದಿಂದ ಸಿಗುವ ಸವಲತ್ತು ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ನಾಗೇಶ್, ಅಂತರ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಮಾಜಿ ಚಾಂಪಿಯನ್ ಶ್ರೀನಿವಾಸ್‌ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಅಶೋಕ್ ಜಯರಾಮ್, ಮೂಡ್ಯ ಚಂದ್ರು, ರಾಘವೇಂದ್ರ ಮುದ್ದನಘಟ್ಟ, ರಾಜ್ಯ ಒಕ್ಕಲಿಗರ ಸಂಘದ ಕೊಳ್ಳುವ ಸಮಿತಿ ಮತ್ತು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ವೆಂಕಟರಾಮೇಗೌಡ, ಕಿಮ್ಸ್ ಹಾರ್ಟ್ ಸೆಂಟರ್ ಅಧ್ಯಕ್ಷ ಟಿ.ಎಚ್.ಆಂಜನಪ್ಪ, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೀವ್ ಭಾಗವಹಿಸಿದ್ದರು.
‘ಒಕ್ಕಲಿಗರ ಭವನ ನಿರ್ಮಾಣ’
ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ಎನ್.ಬಾಲಕೃಷ್ಣ (ನೆಲ್ಲಿಗೆರೆ ಬಾಲು) ಮಾತನಾಡಿ ‘ಮಂಡ್ಯದಲ್ಲಿ ಎರಡು ಎಕರೆ ಜಾಗ ಕೊಟ್ಟರೆ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಭವ್ಯವಾದ ಒಕ್ಕಲಿಗರ ಭವನ ಕಟ್ಟುತ್ತೇವೆ. ಎರಡು ಎಕರೆ ಜಾಗಕ್ಕೆ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಮುಂದಿನ ಕೆಲವೇ ತಿಂಗಳಲ್ಲಿ ಮಂಡ್ಯದಲ್ಲಿ ಪ್ಯಾರಾ ಮೆಡಿಕಲ್ ಹಾಗೂ ಫಾರ್ಮಸಿ ಪ್ರಾರಂಭಿಸಿ ಆಸ್ಪತ್ರೆ ಪ್ರಾರಂಭ ಮಾಡಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.