ಮದ್ದೂರು: ಖರೀದಿ ಕೇಂದ್ರಗಳಿಂದ ರೈತರಿಂದ ಖರೀದಿಸಿರುವ ರಾಗಿಯ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ತಾಲ್ಲೂಕು ಆಡಳಿತವನ್ನು ಒತ್ತಾಯಿಸಿ ರೈತ ಸಂಘದ ವತಿಯಿಂದ ಪಟ್ಟಣದ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ‘ರೈತರಿಂದ ರಾಗಿಯನ್ನು ಖರೀದಿಸಿ ಮೂರು ತಿಂಗಳು ಕಳೆದಿದ್ದರೂ ಇದುವರೆಗೂ ಸರ್ಕಾರದಿಂದ ರೈತರಿಗೆ ಹಣ ಬಿಡುಗಡೆಯಾಗಿಲ್ಲ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದ್ದು, ರೈತರು ತಮ್ಮ ಮಕ್ಕಳಿಗೆ ಶಾಲಾ– ಕಾಲೇಜುಗಳ ಶುಲ್ಕವನ್ನು ಭರಿಸಲಿಕ್ಕೆ ಆಗುತ್ತಿಲ್ಲ’ ಎಂದು ದೂರಿದರು.
ತಾಲ್ಲೂಕು ವ್ಯಾಪ್ತಿಯಲ್ಲಿ ಖರೀದಿಸಿರುವ ರಾಗಿ ಹಣ ಅಂದಾಜು ₹ 3 ಕೋಟಿಗಳಷ್ಟು ಇದ್ದು, ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು.
ರೈತ ಸಂಘದ ಮುಖಂಡರಾದ ಸೊ.ಸಿ. ಪ್ರಕಾಶ್, ಮಂಜು, ರಾಮೇಗೌಡ, ರಮೇಶ್, ಪುಟ್ಟಸ್ವಾಮಿ, ಗೌಡಯ್ಯ ಹಲವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.