ADVERTISEMENT

‘ಕನ್ನಡದ ಬಗ್ಗೆ ಅಭಿಮಾನವಿರಲಿ’

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 3:00 IST
Last Updated 25 ನವೆಂಬರ್ 2025, 3:00 IST
ಕೆ.ಆರ್.ಪೇಟೆ ತಾಲ್ಲೂಕಿನ ವಳಗೆರೆ ಮೆಣಸ ಕಿತ್ತೂರುರಾಣಿ  ಚೆನ್ನಮ್ಮ ವಸತಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದಿಂದ ಈಚೆಗೆ ಆಯೋಜಿಸಿದ್ದ ಶಾಲೆಗೊಂದು ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಪವಿತ್ರಾ ಮಾತನಾಡಿದರು
ಕೆ.ಆರ್.ಪೇಟೆ ತಾಲ್ಲೂಕಿನ ವಳಗೆರೆ ಮೆಣಸ ಕಿತ್ತೂರುರಾಣಿ  ಚೆನ್ನಮ್ಮ ವಸತಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದಿಂದ ಈಚೆಗೆ ಆಯೋಜಿಸಿದ್ದ ಶಾಲೆಗೊಂದು ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಪವಿತ್ರಾ ಮಾತನಾಡಿದರು   

ಕೆ.ಆರ್.ಪೇಟೆ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ನನ್ನ ನುಡಿ, ನಾಡು ಎಂಬ ಅಭಿಮಾನ ಮೂಡಿದರೆ ಕನ್ನಡ ಭಾಷೆ ಮತ್ತು ಸಂಸ್ಕೃತಿ ಸುಭ್ರವಾಗಿರಬಲ್ಲದು ಎಂದು ವಿಶ್ರಾಂತ ಕನ್ನಡ ಅಧ್ಯಾಪಕ ಚಾ.ಶಿ.ಜಯಕುಮಾರ್ ಹೇಳಿದರು.

ತಾಲ್ಲೂಕಿನ ವಳಗೆರೆ ಮೆಣಸ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದಿಂದ ಮಂಗಳವಾರ ಆಯೋಜಿಸಿದ್ದ ‘ಶಾಲೆಗೊಂದು ಕಾರ್ಯಕ್ರಮ’ ಮತ್ತು ಕಾದಂಬರಿಕಾರ ಎಸ್.ಎಲ್.ಭೈರಪ್ಪ ಸಂಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡ ಪ್ರಾಚೀನವಾಗಿದ್ದು, ದ್ರಾವಿಡ ಭಾಷೆಗಳಲ್ಲಿಯೇ ಸುಲಭ ಮತ್ತು ಸುಲಲಿತ ನುಡಿಯಾಗಿದೆ. ಎಂತಹವರೂ ಈ ಭಾಷೆ ಕಲಿತು ವ್ಯವಹರಿಸಬಹುದು. ಕನ್ನಡಿಗರು ಪ್ರಾಚೀನ ಕಾಲದಿಂದಲೂ ಸಂಯಮ ಮತ್ತು ಸರಳತೆಗೆ ಹೆಸರಾಗಿದ್ದವರು. ನಮ್ಮ ನಾಡು ವಿಸ್ತಾರವಾಗಿದ್ದು, ದಕ್ಷಿಣ ಭಾರತದಲ್ಲಿಯೇ ಹೆಸರಾಂತ ಪ್ರದೇಶವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಐತಿಹಾಸಿಕ ವಿಚಾರಗಳು ಮರೆಯಾಗುತಿದ್ದು, ನಾಡು–ನುಡಿ ಸೊರಗುತ್ತಿದೆ. ಅದನ್ನು ರಕ್ಷಿಸಿ ಪೊರೆಯುವ ಜವಾಬ್ದಾರಿಯನ್ನು ಯುವಕರು ಮತ್ತು ವಿದ್ಯಾರ್ಥಿಗಳ ಹೊರಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಎಸ್.ಎಲ್.ಭೈರಪ್ಪ ಬದುಕು ಮತ್ತು ಬರಹ’ ಕುರಿತು ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಮಂಜುನಾಥ್, ‘ಭಾರತೀಯ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯ ಪರಂಪರೆಗೆ ಮಹತ್ವದ ಸ್ಥಾನವಿದ್ದು, ನಾವು ಕನ್ನಡಿಗರೆಂಬ ಭಾವನೆ ಸದಾ ಬೋರ್ಗರೆಯುಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಪವಿತ್ರಾ ‘ಕನ್ನಡ ಮಾತನಾಡುವ ಜನರನ್ನು ಮತ್ತು ಪ್ರದೇಶವನ್ನು ಒಗ್ಗೂಡಿಸಲು ನಮ್ಮ ಹಿರಿಯರು ರಕ್ತ ಸುರಿಸಿದ್ದಾರೆ. ಅವರ ಹೋರಾಟವನ್ನು ನಾವು ಮರೆಯದೇ ನಾಡಿನ ಏಕತೆಯನ್ನು ಕಾಪಾಡಬೇಕು’ ಎಂದರು.

ವಸತಿ ಶಾಲೆಯ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.