
ಶ್ರೀರಂಗಪಟ್ಟಣ: ‘ಗ್ರಾಮ ಪಂಚಾಯಿತಿ ಕಚೇರಿಗಳು ಜನಸ್ನೇಹಿಯಾಗಿರಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ವಿಳಂಬ ಧೋರಣೆ ಅನುಸರಿಸಿದರೆ ಸಹಿಸುವುದಿಲ್ಲ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಎಚ್ಚರಿಸಿದರು.
ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ₹70 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಗ್ರಾ.ಪಂ. ಕಚೇರಿ ಕಟ್ಟಡವನ್ನು ಶುಕ್ರವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ‘ತಮ್ಮ ಕೆಲಸಗಳಿಗಾಗಿ ಗ್ರಾ.ಪಂ. ಕಚೇರಿಗೆ ಬರುವ ಸಾರ್ವಜನಿಕರನ್ನು ಗೌರವದಿಂದ ಕಾಣಬೇಕು. ಕೂರಲು ಆಸನ, ಕುಡಿಯುವ ನೀರು, ಶೌಚಾಲಯ ವ್ಯಸ್ಥೆ ಸಮರ್ಪಕವಾಗಿರಬೇಕು. ಪ್ರತಿ ಗ್ರಾ.ಪಂ. ಕಚೇರಿಗಳಲ್ಲಿ ದೂರು ಪೆಟ್ಟಿಗೆ ಇಡಬೇಕು. ಗ್ರಾಮಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಮೂಲ ಸೌಕರ್ಯ ಕೊರತೆಯಾಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಪ್ರಾಸ್ತಾವಿಕ ಮಾತನಾಡಿ, ‘ಶಾಸಕರ ಅನುದಾನ, 15ನೇ ಹಣಕಾಸು ಯೋಜನೆ ಮತ್ತು ಸ್ಥಳೀಯ ಸಂಪನ್ಮೂಲ ಸಂಗ್ರಹಿಸಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಗ್ರಾಮೀಣ ಪ್ರದೇಶದ ಜನರು ಘನತೆಯಿಂದ ಬದುಕಬೇಕು ಎಂಬ ಆಶಯಕ್ಕೆ ಪೂರಕವಾಗಿ ಈ ಕಟ್ಟಡ ರೂಪುಗೊಂಡಿದೆ’ ಎಂದರು.
ಜಿ.ಪಂ. ಮಾಜಿ ಸದಸ್ಯ ಎಸ್.ಎಲ್. ಲಿಂಗರಾಜು, ‘ಅಧಿಕಾರಿಗಳು, ಸಿಬ್ಬಂದಿ ಮತ್ತು ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಗೆ ನಿನಜವಾದ ಅರ್ಥ ಬರುತ್ತದೆ’ ಎಂದು ಹೇಳಿದರು.
ತಹಶೀಲ್ದಾರ್ ಚೇತನಾ ಯಾದವ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎ.ಬಿ. ವೇಣು, ಎಇಇ ಮಂಜುನಾಥ್, ತಾಲ್ಲೂಕು ಯೋಜನಾಧಿಕಾರಿ ಎಂ.ಎಂ. ತ್ರಿವೇಣಿ, ಗ್ರಾ.ಪಂ. ಅಧ್ಯಕ್ಷೆ ಹರ್ಷಿತಾ ಜಗದೀಶ್, ಉಪಾಧ್ಯಕ್ಷೆ ಕವಿತಾ, ಸದಸ್ಯರಾದ ಬೋರಪ್ಪ, ಅಪ್ಪಾಜಿ, ರಜಿನಿ, ಕೀರ್ತಿಕುಮಾರ್, ನರಸಿಂಹಯ್ಯ, ಸುವರ್ಣ, ಮಹೇಶ್ವರಿ, ಯಶೋಧ, ಎಂ.ಜೆ. ಸುರೇಶ್, ಎಂ.ಪಿ. ಶ್ಯಾಂ, ಅನಿತಾ, ಚಂದ್ರಕಲಾ, ಕಾರ್ಯದರ್ಶಿ ತಿಮ್ಮರಾಜು, ಬಿಲ್ ಕಲೆಕ್ಟರ್ ಆನಂದ್, ಗುತ್ತಿಗೆದಾರ ಶಿವಕುಮಾರ್ ಹಾಗೂ ವಿವಿಧ ಗ್ರಾ.ಪಂಗಳ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.