ADVERTISEMENT

ಕೆ.ಆರ್.ಪೇಟೆ | ಕಳಪೆ ರಾಗಿ ಪೂರೈಕೆಯ ತನಿಖೆ: ಪ್ರತೀಕ್ ಹೆಗ್ಗಡೆ

ರೈತಸಂಘದ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 7:00 IST
Last Updated 24 ಜನವರಿ 2026, 7:00 IST
ಕೆ.ಆರ್.ಪೇಟೆ ಪಟ್ಟಣದ ಮಿನಿವಿದಾನಸೌಧದಲ್ಲಿ ಆಹಾರ ಇಲಾಖೆಯ ಜಿಲ್ಲಾ ನಿರ್ದೇಶಕ ಪ್ರತೀಕ್ ಹೆಗ್ಗಡೆ ರೈತ ಮುಖಂಡರೊಂದಿಗೆ ಸಭೆ ನಡೆಸಿದರು
ಕೆ.ಆರ್.ಪೇಟೆ ಪಟ್ಟಣದ ಮಿನಿವಿದಾನಸೌಧದಲ್ಲಿ ಆಹಾರ ಇಲಾಖೆಯ ಜಿಲ್ಲಾ ನಿರ್ದೇಶಕ ಪ್ರತೀಕ್ ಹೆಗ್ಗಡೆ ರೈತ ಮುಖಂಡರೊಂದಿಗೆ ಸಭೆ ನಡೆಸಿದರು   

ಕೆ.ಆರ್.ಪೇಟೆ: ‘ತಾಲ್ಲೂಕಿಗೆ ಕಳೆಪ ರಾಗಿ ಪೂರೈಕೆಯಾಗಿರುವ ಬಗ್ಗೆ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು ಸೂಕ್ತ ತನಿಖೆಗೆ ಅಗತ್ಯ ವರದಿ ನೀಡುತ್ತೇನೆ. ಗ್ರಾಹಕರು ಕಳಪೆ ಪಡಿತರ ಪೂರೈಕೆಯಾದರೆ ಅದನ್ನು ನಿರಾಕರಿಸಿ ನಮ್ಮ ಇಲಾಖೆಯ ಸಹಾಯವಾಣಿ ನಂ.1967 ಸಂಖ್ಯೆಗೆ ಕರೆ ಮಾಡಿ ದೂರು ನೀಡಿದರೆ ತಕ್ಷಣವೇ ಕ್ರಮ ವಹಿಸಲಾಗುವುದು’ ಎಂದು ಆಹಾರ ಇಲಾಖೆಯ ಜಿಲ್ಲಾ ನಿರ್ದೇಶಕ ಪ್ರತೀಕ್ ಹೆಗ್ಗಡೆ ಹೇಳಿದರು.

ನ್ಯಾಯಬೆಲೆ ಅಂಗಡಿಗಳಿಗೆ ಕಳಪೆ ರಾಗಿ ಪೂರೈಸಿರುವ ಬಗ್ಗೆ ರೈತ ಸಂಘದ ಕಾರ್ಯಕರ್ತರು ಮತ್ತು ಮುಖಂಡರು ಪ್ರತಿಭಟನೆ ನಡೆಸಿದ್ದ ಹಿನ್ನಲೆಯಲ್ಲಿ ಶುಕ್ರವಾರ ಪಟ್ಟಣದ ಮಿನಿವಿಧಾನಸೌಧದಲ್ಲಿ ಅವರು ಸಭೆ ನಡೆಸಿದರು.

‘ಕಳಪೆ ರಾಗಿ ಪೂರೈಸಿರುವ ತಪ್ಪತಸ್ಥರಿಗೆ ಶಿಕ್ಷೆಯಾಗಬೇಕೆನ್ನುವ ರೈತಸಂಘದ ವಾದಕ್ಕೆ ನನ್ನ ಬೆಂಬಲವೂ ಇದೆ. ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆಯಾಗುವ ಪಡಿತರ ಆಹಾರ ಧಾನ್ಯಗಳ ಗುಣಮಟ್ಟವನ್ನು ಆಹಾರ ನಿಯಂತ್ರಣ ಇಲಾಖೆ (ಎಫ್.ಸಿ.ಎ) ಪರಿಶೀಲಿಸಿದ ಅನಂತರವೇ ಇಲಾಖೆಯ ಗೋದಾಮಿಗೆ ಬರುತ್ತದೆ. ಅಲ್ಲಿಂದ ಅದನ್ನು ಸಾರ್ವಜನಿಕ ವಿತರಣೆಗೆ ನೀಡಲಾಗುತ್ತದೆ. ಪ್ರಸ್ತುತ ಇಲ್ಲಿಗೆ ಪೂರೈಕೆಯಾಗಿರುವ ರಾಗಿ ಹಾಸನ ಜಿಲ್ಲೆಯ ಜಾವಗಲ್ ಗೋದಾಮಿನಿಂದ ಬಂದಿದ್ದು ಹತ್ತು ದಿನಗಳ ಕಾಲಾವಕಾಶ ನೀಡಿದರೆ ಹಾಸನ ಜಿಲ್ಲೆಯ ಆಹಾರ ಇಲಾಖೆಯ ನಿರ್ದೇಶಕರನ್ನು ಇಲ್ಲಿಗೆ ಕರೆತಂದು ನಿಮ್ಮ ಮುಂದೆ ಮತ್ತೆ ಚರ್ಚಿಸಲು ಅವಕಾಶ ಮಾಡಿಕೊಡುತ್ತೇನೆ’ ಎಂದು ಮನವಿ ಮಾಡಿದರು.

ADVERTISEMENT

ನಿರ್ದೇಶಕರ ಮಾತಿಗೆ ಸಹಮತ ವ್ಯಕ್ತಪಡಿಸಿದ ಹಿರಿಯ ಮುಖಂಡ ಮುದುಗೆರೆ ರಾಜೇಗೌಡ, ‘ತಾಲ್ಲೂಕಿನಲ್ಲಿ ಗ್ರಾಹಕರಿಗೆ ನ್ಯಾಯಬೆಲೆ ಅಂಗಡಿಯ ಮೂಲಕ ಕಳಪೆ ಗುಣಮಟ್ಟದ ಪಡಿತರ ರಾಗಿ ವಿತರಣೆ ಮಾಡುತ್ತಿರುವುದನ್ನು ರೈತಸಂಘ ಪತ್ತೆ ಹಚ್ಚಿ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಮಾಡಿ ಕ್ರಮ ವಹಿಸಿ ಎಂದು ಆಗ್ರಹಿಸಿ ತಿಂಗಳಾಗತ್ತಾ ಬಂದರೂ ಯಾವ ಕ್ರಮ ಕೈಗೊಳ್ಳದೆ ದಿನ ಮುಂದೂಡುವದು ಸರಿಯಾದ ಕ್ರಮವಲ್ಲ’ ಎಂದರು.

ರಾಜ್ಯ ರೈತಸಂಘದ ತಾಲ್ಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಮುಖಂಡರಾದ ಎಲ್.ಬಿ.ಜಗದೀಶ್, ಹೊನ್ನೇಗೌಡ, ನಗರೂರು ಕುಮಾರ್, ಚೌಡೇನಹಳ್ಳಿ ಕೃಷ್ಣೇಗೌಡ, ಹಿರೀಕಳಲೆ ಬಸವರಾಜು, ಲಕ್ಷ್ಮೀಪುರ ನಾಗರಾಜು, ಮುದ್ದುಕುಮಾರ್, ಆಹಾರ ಇಲಾಖೆಯ ಪರಿವೀಕ್ಷಕ ಬಸವರಾಜು, ಆಹಾರ ನಿರೀಕ್ಷಕ ನಟರಾಜು ಸೇರಿದಂತೆ ತಾಲೂಕಿನ ವಿವಿಧ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಸಭೆಯಲ್ಲಿದ್ದರು.

ರೈತ ಮುಖಂಡರಿಂದ ಹೋರಾಟದ ಎಚ್ಚರಿಕೆ

‘ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮಾಜಕ್ಕೆ ಮೋಸ ಮಾಡುವವರ ಪರ ನಿಂತು ಬಡವರಿಗೆ ಮಣ್ಣು ತಿನ್ನಿಸುವ ಕೆಲಸ ಮಾಡಬೇಡಿ. ಜನರು ದೂರು ಕೊಟ್ಟಾಗ ಮಾತ್ರ ಪರಿಶೀಲಿಸುವುದಾರೆ ನಿಮ್ಮ ಜವಾಬ್ದಾರಿ ಏನು? ಏಜೆನ್ಸಿ ನೀಡಿದನ್ನು ಪರಿಶೀಲಿಸದೆ ಗ್ರಾಹಕರಿಗೆ ವಿತರಿಸುವುದಾದರೆ ನಿಮ್ಮ ಇಲಾಖೆಯ ಅಗತ್ಯವೇನು? ಎಂದು ತರಾಟೆಗೆ ತೆಗೆದುಕೊಂಡ ಅವರು ಕೊಟ್ಟ ಮಾತಿನಂತೆ ಮುಂದಿನ 10 ದಿನಗಳ ಒಳಗಾಗಿ ಕಳಪೆ ರಾಗಿ ಪೂರೈಕೆ ಸಂಬಂಧ ಅಗತ್ಯ ಕ್ರಮವಾಗಬೇಕು. ಇಲ್ಲದಿದ್ದರೆ ರಾಜ್ಯ ರೈತಸಂಘ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಸಭೆಯಲ್ಲಿದ್ದ ರೈತ ಮುಖಂಡರು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.