
ಮಂಡ್ಯ: ‘ಮದ್ದೂರು ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿ, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಕೂಲ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿಗಳನ್ನು ಸೇರಿಸುವ ಹುನ್ನಾರ ನಿಲ್ಲಬೇಕು’ ಎಂದು ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಆಗ್ರಹಿಸಿದರು.
ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಹಾಗೂ ಚಾಮನಹಳ್ಳಿ, ಸೋಮನಹಳ್ಳಿ, ಗೊರವಾಲೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿಲ್ಲ. ಆದರೆ ಶಾಸಕ ಉದಯ್ ಅವರು ಏಕಪಕ್ಷೀಯವಾಗಿ ನಗರಸಭೆಗೆ ಸೇರಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಆರೋಪಿಸಿದರು.
ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ತರುವ ಸಲುವಾಗಿ ಗ್ರಾ.ಪಂ. ನಿರ್ಣಯಗಳನ್ನು ಗಾಳಿಗೆ ತೂರುವ ಮೂಲಕ ಅನ್ಯಾಯ ಮಾಡಿದ್ದಾರೆ. ಆದರೆ, ನಮ್ಮ ಪಂಚಾಯಿತಿಗಳು ಸಂಪದ್ಭರಿತವಾಗಿವೆ. ಕೆಲವು ಗ್ರಾಮ ಪಂಚಾಯಿತಿಗಳು ಸಂಕಷ್ಟದಲ್ಲಿವೆ. ಅವುಗಳನ್ನು ಸೇರ್ಪಡೆಗೊಳಿಸಿಕೊಂಡು ಅಭಿವೃದ್ಧಿ ಪಡಿಸಿಕೊಳ್ಳಲಿ ಎಂದರು.
ನಗರಸಭೆಗೆ ಸೇರಿಸಿಕೊಳ್ಳುವುದರಿಂದ ಪಂಚಾಯಿತಿಗಳಿಗೆ ಈಗಿರುವ ಕೃಪಾಂಕ, ನರೇಗಾ ಸೌಲಭ್ಯ ಸಿಗುವುದಿಲ್ಲ, ಮೂರು ಪಟ್ಟು ತೆರಿಗೆ ಹಣವನ್ನು ರೈತರು ಭರಿಸಬೇಕಾಗುತ್ತದೆ. ನಮ್ಮ ಕೃಷಿ ಜಮೀನುಗಳು ಖಾಸಗೀ ಮಾರಾಟಕ್ಕೆ ಇಟ್ಟಿಲ್ಲ. ಇದನ್ನು ಅರಿತುಕೊಳ್ಳದ ಶಾಸಕ ಉದಯ್ ಅವರು ಹಠಕ್ಕೆ ಬಿದ್ದು ರೈತರ ಮೇಲೆ ಜಿದ್ದು ತೀರಿಸಿಕೊಂಡಿದ್ದಾರೆ ಎಂದು ದೂರಿದರು.
ಶಾಸಕ ಉದಯ್ ಅವರು ಕೊಟ್ಟ ಮಾತಿಗೆ ತಪ್ಪಿದ್ದಾರೆ. ಚಳವಳಿಗಳನ್ನು ಲಘುವಾಗಿ ಪರಿಗಣಿಸದೇ ನಿಮ್ಮ ಇಚ್ಛಾಶಕ್ತಿಗೆ ತಕ್ಕಂತೆ ರಿಯಲ್ ಎಸ್ಟೇಟ್ ಉದ್ಯಮ ನಡೆಸದೇ ಚಳವಳಿ ತೀವ್ರಗೊಳ್ಳುವ ಮೊದಲೇ ಎಚ್ಚೆತ್ತುಕೊಂಡರೆ ಒಳ್ಳೆಯದು ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್.ರಾಧಾ ಮತ್ತು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಪಿ. ಯೋಗೇಶ್ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಸ. ಮಹೇಂದ್ರ, ಜಿ.ಎಚ್.ವೀರಪ್ಪ, ಚಂದ್ರಶೇಖರ್, ಲಿಂಗಪ್ಪಾ, ಯಜಮಾನ್ ಶಂಕರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.