ADVERTISEMENT

ಮೇಲುಕೋಟೆ | ಉದ್ಭವ ಮೂರ್ತಿಯ ವೈಭವದ ಜಾತ್ರೋತ್ಸವ: ಹುಲಿವಾಹನೋತ್ಸವದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 3:57 IST
Last Updated 26 ಅಕ್ಟೋಬರ್ 2025, 3:57 IST
ಮಹದೇಶ್ವರಸ್ವಾಮಿಯ ವಿಶೇಷ ಅಲಂಕಾರ
ಮಹದೇಶ್ವರಸ್ವಾಮಿಯ ವಿಶೇಷ ಅಲಂಕಾರ   

ಮೇಲುಕೋಟೆ: ಮಹದೇಶ್ವರಪುರದಲ್ಲಿ ಉದ್ಭವ ಮೂರ್ತಿಯಾಗಿ ನೆಲೆ ನಿಂತಿರುವ ಕಲಿಯುಗ ದೈವ ಮಹದೇಶ್ವರ ಸ್ವಾಮಿಗೆ ಶ್ರದ್ದಾಭಕ್ತಿಯಿಂದ ಕೈಮುಗಿದು ಇಷ್ಟಾರ್ಥಗಳನ್ನು ಸಿದ್ಧಿಸುವಂತೆ ಹರಕೆ ಹೊತ್ತು ಪ್ರಾರ್ಥಿಸಿದರೆ ಬೇಡಿದ ವರವನ್ನು ದಯಪಾಲಿಸುತ್ತಾನೆ ಎಂಬುದು ಇಲ್ಲಿನ ಲಕ್ಷಾಂತರ ಭಕ್ತರ ನಂಬಿಕೆ.

ಮೇಲುಕೋಟೆ ಹೋಬಳಿಯ ಮಹದೇಶ್ವರಪುರದಲ್ಲಿ ನೆಲೆ ನಿಂತಿರುವ ಮಹದೇಶ್ವರಸ್ವಾಮಿ ಸುತ್ತಲಿನ ಗ್ರಾಮಸ್ಥರ ಹಾಗೂ ರೈತರ ಕಷ್ಟವನ್ನು ಮಂಜಿನಂತೆ ಕರಗಿಸುವ ಕರುಣಾಮಯಿ ಎಂದೇ ಪ್ರಸಿದ್ಧಿ ಪಡೆದಿದೆ. 

ಮೂಡಲ ಮುಖವಾಗಿ ಒಡೆದು ಮೂಡಿ ನೆಲೆಯಾಗಿರುವ ಮಹದೇಶ್ವರ ಭಕ್ತರ ಶ್ರೀರಕ್ಷಕ. ಮಳೆ, ಬೆಳೆ, ವ್ಯಾಜ್ಯ, ಸಂತಾನ, ವಿವಾಹ, ರೋಗ-ರುಜಿನ, ಆರೋಗ್ಯ, ಕೌಟುಂಬಿಕ ಕಲಹ, ಹಣಕಾಸು ತೊಂದರೆ.. ಹೀಗೆ ಅನೇಕ ಕಷ್ಟಗಳನ್ನು ಎದುರಿಸುವ ಭಕ್ತರು ಹರಕೆ ಹೊತ್ತು ಪೂಜಿಸಿದರೆ ಎಲ್ಲವೂ ಬಗೆಹರಿಯುತ್ತದೆ ಎನ್ನುತ್ತಾರೆ ಗ್ರಾಮಸ್ಥರು. 

ADVERTISEMENT

ಜಮೀನಿನಲ್ಲಿ ಕಲ್ಲು ಪತ್ತೆ:

ನೂರಾರು ವರ್ಷಗಳ ಹಿಂದೆ ರೈತರೊಬ್ಬರು ಜಮೀನಿನಲ್ಲಿ ಉಳುಮೆ ಮಾಡುವಾಗ ನೇಗಿಲಿಗೆ ಅಡ್ಡಲಾಗಿ ಕಲ್ಲೊಂದು ಸಿಕ್ಕಿತ್ತು. ಉಳುತ್ತಿದ್ದ ನೇಗಿಲಿನ ಮೊನಚು ಕಲ್ಲಿಗೆ ರಭಸವಾಗಿ ಬಡಿದಿದ್ದರಿಂದ ಕಲ್ಲಿನ ಹಿಂಬದಿಯಲ್ಲಿ ರಕ್ತ ಸುರಿಯುತ್ತಿತ್ತಂತೆ. ಇದರಿಂದ ಗ್ರಾಮಸ್ಥರೆಲ್ಲ ಭಯಗೊಂಡು ಭಕ್ತರೊಬ್ಬರ ಕನಸಿನಲ್ಲಿ ಕಾಣಿಸಿಕೊಂಡ ಮಹದೇಶ್ವರ, ನಾನು ಗ್ರಾಮದ ಜಮೀನಿನಲ್ಲಿ ಒಡೆದು ಮೂಡುತ್ತಿದ್ದು, ಭಕ್ತಿಯಿಂದ ಪೂಜಿಸಿದರೆ ಕಷ್ಟಗಳೆಲ್ಲವು ಪರಿಹಾರವಾಗುತ್ತದೆ ಎಂದು ಹೇಳಿ ಮಾಯವಾದನು ಎಂಬುದು ಧಾರ್ಮಿಕ ಕಥೆ.

ಅಂದಿನಿಂದ ಮಹದೇಶ್ವರನಿಗೆ ಸ್ಥಳದಲ್ಲೇ ಗುಡಿ ಕಟ್ಟಿ ಪೂಜಿಸಿಕೊಂಡು ಬರಲಾಗುತ್ತಿದೆ. ದೇವಸ್ಥಾನದ ಹೆಸರಲ್ಲಿ ಟ್ರಸ್ಟ್ ನಿರ್ಮಿಸಿಕೊಂಡು ದೇವಸ್ಥಾನ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಜೋಡೆತ್ತುಗಳ ಕಟ್ಟಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಲಾಗುತ್ತಿದೆ. 

ಮಹದೇಶ್ವರ ಗ್ರಾಮದ ಸುತ್ತಲಿನ ಲಕ್ಷ್ಮೀಸಾಗರ, ಇಂಗಲಗುಪ್ಪೆ ಛತ್ರ, ಕೆರೆತೊಣ್ಣೂರು, ಬೇವಿನಕುಪ್ಪೆ, ಬಳೆ ಅತ್ತಿಗುಪ್ಪೆ, ಬನ್ನಘಟ್ಟ, ಕೆ.ಸೊಸೂರು, ನೀಲನಹಳ್ಳಿ, ಸಣಬದಕೊಪ್ಪಲು, ಬೆಳಾಳೆ, ಕೋಡಾಲ ಸೇರಿದಂತೆ ಅನೇಕ ಗ್ರಾಮಗಳಿಂದ ಹುಲಿವಾಹನೋತ್ಸವದದೊಂದಿಗೆ ಎತ್ತುಗಳನ್ನು ಕರೆತಂದು ದೇವಸ್ಥಾನ ಸುತ್ತ ಪ್ರದಕ್ಷಿಣೆ ಮಾಡಿಸಲಾಗುತ್ತದೆ.

ಮಹದೇಶ್ವರಸ್ವಾಮಿ ಜಾತ್ರೆ ನಿಮಿತ್ತ ಮೇಲುಕೋಟೆ ಹೋಬಳಿಯ ಮಹದೇಶ್ವರಪುರದಲ್ಲಿ ಜನಪದ ಕಲಾಮೇಳದೊಂದಿಗೆ ಅದ್ದೂರಿಯಾಗಿ ಹುಲಿವಾಹನೋತ್ಸವ ನಡೆಯಿತು
ನಮ್ಮ ಪೂರ್ವಿಕರ ಕಾಲದಿಂದಲೂ ಮಹದೇಶ್ವರಸ್ವಾಮಿಗೆ ಪೂಜೆ ಮಾಡಿಕೊಂಡು ಬರುತ್ತಿದ್ದೇವೆ. ದೇವರ ಮೇಲೆ ನಂಬಿಕೆ ಇಟ್ಟು ಪೂಜಿಸಿದರೆ ಕಷ್ಟಗಳು ದೂರವಾಗುತ್ತವೆ
ನಿಂಗರಾಜು ದೇವಾಲಯದ ಅರ್ಚಕ

ಕಾರ್ತಿಕ ಮಾಸದಲ್ಲಿ ಜಾತ್ರೆ

‘ನಮ್ಮ ಪೂರ್ವಿಕರ ಕಾಲದಿಂದಲೂ ಮಹದೇಶ್ವರಸ್ವಾಮಿಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿಕೊಂಡು ಬರಲಾಗುತ್ತಿದೆ. ದೇವರ ಕೃಪೆಯಿಂದ ಜನರ ಕಷ್ಟಗಳು ಬಗೆಹರಿಯುತ್ತಿವೆ. ಕಾರ್ತಿಕ ಮಾಸದಲ್ಲಿ ನಡೆಯುವ ಜಾತ್ರಾ ಮಹೋತ್ಸವ ವಿಶೇಷವಾಗಿದ್ದು ಪ್ರತಿ ವರ್ಷ ಜಾತ್ರೆ ಅದ್ದೂರಿಯಾಗಿ ಜರುಗುತ್ತದೆ. ದೇವರ ಮಹಿಮೆಯಿಂದ ಸುತ್ತಲಿನ ಎಲ್ಲ ಗ್ರಾಮಸ್ಥರು ರೈತರು ನೆಮ್ಮದಿಯಿಂದ ಬದುಕುತ್ತಿದ್ದಾರೆ’ ಎನ್ನುತ್ತಾರೆ ಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಕಾಂಗ್ರೆಸ್‌ ಮುಖಂಡ ಎ.ವಿಜೇಂದ್ರಮೂರ್ತಿ. 

ಹಬ್ಬದಂದು ವಿಶೇಷ ಪೂಜೆ ಹಾಗೂ ಹುಲಿವಾಹನೋತ್ಸವ ನಡೆಯುತ್ತದೆ. ಹರಕೆ ಹೊತ್ತವರು ದೇವಸ್ಥಾನದ ಸುತ್ತ ಹುಲಿವಾಹನ ಎಳೆದು ಪುನೀತರಾಗುತ್ತಾರೆ. ಮಹಾಶಿವರಾತ್ರಿ ದಿನದಂದು ಬೆಳಗಿನ ಜಾವದವರೆಗೂ ಪೂಜಾ ಕೈಂಕರ್ಯಗಳು ನಡೆಯುತ್ತವೆ. ದೀಪಾವಳಿಯಲ್ಲಿ ಒಂದು ತಿಂಗಳು ವಿಶೇಷ ಹೂವಿನ ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ದೀಪಾವಳಿ ಮರುದಿನದಿಂದ 6 ದಿನಗಳ ಕಾಲ ಜಾತ್ರಾ ಮಹೋತ್ಸವ ಹಾಲು ಎಣ್ಣೆ ಮಜ್ಜನ ನಡೆಯುತ್ತದೆ. 14ಕ್ಕೂ ಹೆಚ್ಚು ಗ್ರಾಮಗಳ ಜನರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.