ADVERTISEMENT

ಹಿಂದುಳಿದ ವರ್ಗಗಳ ಮೀಸಲಾತಿ ಪರಾಮರ್ಶೆಗೊಳ್ಳಲಿ: ವೆಂಕಟೇಶ್‌

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 10:55 IST
Last Updated 10 ಜನವರಿ 2021, 10:55 IST
ಎಚ್‌.ಎ.ವೆಂಕಟೇಶ್‌
ಎಚ್‌.ಎ.ವೆಂಕಟೇಶ್‌   

ಮಂಡ್ಯ: ‘ಹಿಂದುಳಿದ ವರ್ಗಗಳಿಗೆ ಕಲ್ಪಿಸಿರುವ ಮೀಸಲಾತಿ ಕಳೆದ 43 ವರ್ಷಗಳಿಂದ ಪರಾಮರ್ಶೆಗೊಂಡಿಲ್ಲ. ಹೀಗಾಗಿ ಅವಕಾಶ ವಂಚಿತ ಸಮುದಾಯಗಳು ಇಲ್ಲಿಯವರೆಗೂ ಮೀಸಲಾತಿ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ’ ಎಂದು ಕೆಪಿಸಿಸಿ ವಕ್ತಾರ ಎಚ್‌.ಎ.ವೆಂಕಟೇಶ್‌ ವಿಷಾದಿಸಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ನಗರದ ಗಾಂಧಿಭವನದಲ್ಲಿ ಭಾನುವಾರ ನಡೆದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಹಾವನೂರು ವರದಿ ಆಧರಿಸಿ 1977ರಲ್ಲಿ ದೇವರಾಜ ಅರಸು ದೇಶದಲ್ಲೇ ಮೊದಲ ಬಾರಿಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದರು. ಹಿಂದುಳಿದ ವರ್ಗಗಳ ಕಾಯ್ದೆಯ ಕಲಮು 9ರಂತೆ ಮೀಸಲಾತಿಯನ್ನು ಪ್ರತಿ 10 ವರ್ಷಕ್ಕೊಮ್ಮೆ ಪರಾಮರ್ಶೆಗೆ ಒಳಪಡಿಸಬೇಕು. ಸಮುದಾಯಗಳ ಸ್ಥಿತಿ ಅಧ್ಯಯನ ಮಾಡಿ ಪುನರ್‌ ವರ್ಗೀಕರಣ ಮಾಡಬೇಕು. ಆದರೆ ಈ ಕಾರ್ಯ ಇಲ್ಲಿಯವರೆಗೂ ನಡೆದಿಲ್ಲ’ ಎಂದರು.

ADVERTISEMENT

‘1994ರಲ್ಲಿ ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದಾಗ ವಿವಿಧ ವರ್ಗಗಳಿಗೆ ಒಂದು ವರ್ಷದ ಅವಧಿಗಾಗಿ ಮೀಸಲಾತಿ ಜಾರಿಗೊಳಿಸಲಾಗಿತ್ತು. ಅದು ಕೂಡ ಇಲ್ಲಿಯವರೆಗೆ ಪರಾಮರ್ಶೆಗೊಂಡಿಲ್ಲ. ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ ಸ್ಥಿತಿ ಆಧರಿಸಿ ಮೀಸಲಾತಿ ಸೌಲಭ್ಯ ಪರಾಮರ್ಶೆಗೊಳ್ಳಬೇಕು. ಆಯೋಗಗಳ ಕಾರ್ಯ ಇದೇ ಆಗಿರುತ್ತದೆ. ಮೀಸಲಾತಿಯನ್ನು ವಿಮರ್ಶೆಗೆ ಒಳಪಡಿಸದಿದ್ದಲ್ಲಿ ಸಂವಿಧಾನಕ್ಕೆ ಅಪಚಾರ ಎಸಗಿದಂತಾಗುತ್ತದೆ’ ಎಂದರು.

‘ಎಷ್ಟೋ ಸಮುದಾಯಗಳಲ್ಲಿ ಈಗಲೂ ಒಬ್ಬ ಪದವೀಧರ ಇಲ್ಲ. ಅವೈಜ್ಞಾನಿಕ ಮೀಸಲಾತಿ ವ್ಯವಸ್ಥೆಯಿಂದ ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಮೀಸಲಾತಿ ವಿಚಾರದಲ್ಲಿ ರಾಜಕೀಯ ಒತ್ತಡ ಹೇರಿದರೆ ಸಂವಿಧಾನದ ಉದ್ದೇಶ ಈಡೇರುವುದಿಲ್ಲ’ ಎಂದರು.

‘70ರ ದಶಕವನ್ನು ಅರಸು ಯುಗ ಎಂದೇ ಹೇಳಬೇಕು. ಹಾವನೂರು ವರದಿಯ ನಂತರ ಹಿಂದುಳಿದ ವರ್ಗಗಳ ಯಾವುದೇ ವರದಿ ಜಾರಿಯಾಗಿಲ್ಲ. ನೂರಾರು ಆಯೋಗಗಳು ಬಂದರೂ ಅವಕಾಶ ವಂಚಿತರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಅಂದು ಹಾವನೂರು ವರದಿ ವಿರೋಧಿಸಿದವರೆಲ್ಲಾ ಈಗ ಮೀಸಲಾತಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಬಿಡುಗಡೆಯಾಗಲೇಬೇಕು. ಸರ್ಕಾರ ಒಪ್ಪಲಿ, ಬಿಡಲಿ, ಸಾರ್ವಜನಿಕರ ಮುಂದೆ ವರದಿ ಬರಬೇಕು. ಜನರ ತೆರಿಗೆಯ ₹ 160 ಕೋಟಿ ಖರ್ಚು ಮಾಡಿ, 54 ಮಾನದಂಡಗಳ ಆಧಾರದ ಮೇಲೆ ವರದಿ ರೂಪಿಸಲಾಗಿದೆ. ಇದು ಜನರ ಮುಂದೆ ಬಾರದಿದ್ದರೆ ಸಂವಿಧಾನಕ್ಕೆ ಅಗೌರವ ತೋರಿದಂತಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.