
ಪಾಂಡವಪುರ: ‘ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹಾರ ದೊರಕಿಸಿಕೊಡಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ಸೂಚಿಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧಕ್ಕೆ ಗುರುವಾರ ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ಅವರು ಮಾತನಾಡಿ, ‘ಅಹವಾಲುಗಳನ್ನು ಶೀಘ್ರವೇ ಇತ್ಯರ್ಥಪಡಿಸುವಂತೆ ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ ಅವರಿಗೆ ಸೂಚಿಸಿದರು.
ತಹಶೀಲ್ದಾರ್ ಮತ್ತು ಎ.ಸಿ.ಕಚೇರಿಯಲ್ಲಿ ಬಾಕಿ ಇರುವ ನ್ಯಾಯಾಲಯದ ಪ್ರಕರಣಗಳನ್ನು ತುರ್ತಾಗಿ ಕ್ರಮವಹಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸಬೇಕು. ಬಾಕಿ ಇರುವ ರಿಟ್ ಅರ್ಜಿಗಳ ಪ್ರಕರಣಗಳಿಗೆ ನ್ಯಾಯಾಲಯಕ್ಕೆ ಕಂಡಿಕೆವಾರು ಉತ್ತರ ಸಲ್ಲಿಸುವಂತೆಯೂ ಸೂಚಿಸಿದರು.
‘ಬಾಕಿ ಇರುವ ಲೋಕಾಯುಕ್ತ ಪ್ರಕರಣಗಳ ವರದಿಯನ್ನು ಶೀಘ್ರ ಸಲ್ಲಿಸಬೇಕು. ಪ್ರಕೃತಿ ವಿಕೋಪ, ಆಕಸ್ಮಿಕ ಹಾಗೂ ಇತರೆ ರೀತಿಯ ವಿಕೋಪಗಳಲ್ಲಿ ಬಾಧಿತರಾದವರಿಗೆ ತುರ್ತಾಗಿ ಪರಿಹಾರ ಪಾವತಿ ಮಾಡಲು ಕ್ರಮ ವಹಿಸಬೇಕು. ಇ–ಕಚೇರಿ ಬಾಕಿಯನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು’ ಎಂದು ಸೂಚಿಸಿದರು.
ಕಚೇರಿಯ ಅಭಿಲೇಖಾಲಯ ಶಾಖೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ‘ಹೋಬಳಿಯ ಎಲ್ಲಾ ಸಿಬ್ಬಂದಿಯು ಕೇಂದ್ರ ಸ್ಥಾನದಲ್ಲಿ ಲಭ್ಯವಿದ್ದು, ಸಾರ್ವಜನಿಕರ ಮನವಿಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕು’ ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
‘ಕಂದಾಯ ಇಲಾಖೆಗೆ ಸಂಬಂಧಿಸಿದ ಆಧಾರ್ ಸೀಡಿಂಗ್, ಇ–ಪೌತಿ ಖಾತಾ ಆಂದೋಲನ, ನಮೂನೆ 1ರಿಂದ 5, ಗೈರು ವಿಲೇ ಕಡತ, ಸಕಾಲ, ನ್ಯಾಯಾಲಯಗಳ ಪ್ರಕರಗಳು, ಒತ್ತುವರಿ ತೆರವು, ಭೂಸುರಕ್ಷಾ, 11ಇ ತಿದ್ದುಪಡಿ, ಬಗರ್ ಹುಕುಂ ಅರ್ಜಿಗಳ ವಿಲೇವಾರಿ, ಹಕ್ಕು ಪತ್ರಗಳ ವಿತರಣೆಗಳ ಪ್ರಗತಿ ಪರಿಶೀಲಿಸಿ ಪ್ರಗತಿ ಸಾಧಿಸಿ’ ಎಂದು ಸೂಚಿಸಿದರು.
ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ಶಿರಸ್ತೇದಾರ್ ಮೋಹನ್ ಕುಮಾರ್, ಆರ್‌ಐ ಮಹೇಂದ್ರ, ದಸಂಸ ಮುಖಂಡ ಡಿ.ಕೆ.ಅಂಕಯ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.