ADVERTISEMENT

ಗಗನಚುಕ್ಕಿ ಬಳಿ ರೋಪ್‌ವೇ ನಿರ್ಮಿಸಲು ಬೇಡಿಕೆ

ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 3:56 IST
Last Updated 1 ಮಾರ್ಚ್ 2021, 3:56 IST
ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ (ಬ್ಲಫ್‌)ನ ಗಗನಚುಕ್ಕಿ ಜಲಪಾತದ ಬಳಿ ಮೂಲಸೌಲಭ್ಯ ಕಲ್ಪಿಸುವ ₹ 4 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ಶಾಸಕ ಡಾ.ಕೆ.ಅನ್ನದಾನಿ ನೆರವೇರಿಸಿದರು
ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ (ಬ್ಲಫ್‌)ನ ಗಗನಚುಕ್ಕಿ ಜಲಪಾತದ ಬಳಿ ಮೂಲಸೌಲಭ್ಯ ಕಲ್ಪಿಸುವ ₹ 4 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ಶಾಸಕ ಡಾ.ಕೆ.ಅನ್ನದಾನಿ ನೆರವೇರಿಸಿದರು   

ಮಳವಳ್ಳಿ/ ಬೆಳಕವಾಡಿ: ತಾಲ್ಲೂಕಿನ ಶಿವನಸಮುದ್ರದ ಗಗನಚುಕ್ಕಿ ಜಲಪಾತದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ರೋಪ್‌ವೇ ನಿರ್ಮಿಸಲು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.

ತಾಲ್ಲೂಕಿನ ಶಿವನಸಮುದ್ರ (ಬ್ಲಫ್‌)ನ ಗಗನಚುಕ್ಕಿ ಜಲಪಾತದ ಬಳಿ ಮೂಲಸೌಲಭ್ಯ ಕಲ್ಪಿಸುವ ₹ 4 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ದೇಶದಲ್ಲಿ ಜಲಪಾತಗಳ ಪ್ರವಾಸಿ ತಾಣಗಳಲ್ಲಿ ಜೋಗ ಜಲಪಾತ ಮೊದಲ ಸ್ಥಾನದಲ್ಲಿದೆ. ಗಗನಚುಕ್ಕಿ ಜಲಪಾತ ನಂತರದ ಜನಪ್ರಿಯತೆ ಗಳಿಸಿದೆ. ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ ₹ 4 ಕೋಟಿ ಹಣದಲ್ಲಿ ಪಾರ್ಕ್‌ ನಿರ್ಮಾಣ ಸೇರಿದಂತೆ ಹಲವು ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದರು.

ADVERTISEMENT

ಗಗನಚುಕ್ಕಿ ಪ್ರವಾಸಿ ತಾಣವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಗುರಿ ಇದೆ. ರೋಪ್ ವೇ ನಿರ್ಮಾಣ ಸೇರಿದಂತೆ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಸರ್ಕಾರ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಹೆಚ್ಚುವರಿ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದ ವೇಳೆ ತಾಲ್ಲೂಕಿನ ಅಭಿವೃದ್ಧಿಗೆ ನೀಡಿದ್ದ ₹ 1,300 ಕೋಟಿ ಅನುದಾನವನ್ನು ಈಗಿನ ಸರ್ಕಾರ ತಡೆ ಹಿಡಿದಿದ್ದು, ಅಭಿವೃದ್ಧಿಗೆ ಅನುದಾನ ನೀಡಿ ಎಂದು ಕೇಳಿದರೆ ಕೊರೊನಾ ಸಂಕಷ್ಟ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ತಾಲ್ಲೂಕಿನ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ನನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಸದ್ಯದಲ್ಲಿಯೇ ಶಾಸಕರು ಅನುದಾನ ತರುವ ವಿಶ್ವಾಸವಿದೆ ಎಂದರು.

ಜಿ.ಪಂ.ಸದಸ್ಯ ಹನುಮಂತು, ತಾ.ಪಂ.ವಿರೋಧ ಪಕ್ಷದ ನಾಯಕ ಸೋಮಶೇಖರ್, ಸದಸ್ಯರಾದ ಪುಟ್ಟಸ್ವಾಮಿ, ಮುತ್ತುರಾಜ್, ಪುರಸಭೆ ಸದಸ್ಯ ವಡ್ಡರಹಳ್ಳಿ ಸಿದ್ದರಾಜು, ಟಿಎಪಿಸಿಎಂಎಸ್ ನಿರ್ದೇಶಕ ರಾಜೇಶ್, ಹೊಸಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಜೆಡಿಎಸ್ ಮುಖಂಡರು ಇದ್ದರು.

ಆಕ್ಷೇಪ: ಕಾರ್ಯಕ್ರಮದ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಸ್ವಾಮಿ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು.

ಶಾಸಕ ಡಾ.ಕೆ.ಅನ್ನದಾನಿ ಸಮಾಧಾನ ಪಡಿಸುವ ಯತ್ನ ನಡೆಸಿದರು. ಸಮರ್ಪಕವಾಗಿ ಮಾಹಿತಿ ನೀಡದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟಮಾದಯ್ಯ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಆದರೂ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸದೆ ವಾಪಾಸಾದರು.

ಗ್ರಾ.ಪಂ.ಸದಸ್ಯರಾದ ರಘು, ಮಹೇಶ್, ರಾಜಣ್ಣ, ಮುಖಂಡರಾದ ಮಹದೇವ್, ಸತೀಶ್, ವೆಂಕಟೇಶ್ ಇದ್ದರು.

ಆಹ್ವಾನ ನೀಡದೆ ಕಡೆಗಣನೆ: ಆರೋಪ
ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಗನಚುಕ್ಕಿಯಲ್ಲಿ ಭೂಮಿಪೂಜೆಗೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಹ್ವಾನಿಸದೆ ಕಡೆಗಣಿಸಲಾಗಿದೆ. ಕಾಂಗ್ರೆಸ್ ಬೆಂಬಲಿತ ಆಡಳಿತ ಮಂಡಳಿ ಇದೆ ಎನ್ನುವ ಕಾರಣಕ್ಕೆ ಶಾಸಕರು ಉದ್ದೇಶ ಪೂರ್ವಕವಾಗಿ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಅವಮಾನ ಮಾಡಿದ್ದಾರೆ ಎಂದು ಗ್ರಾಮಪಂಚಾಯಿತಿ ಅಧ್ಯಕ್ಷ ಮಹದೇವಸ್ವಾಮಿ ಆರೋಪಿಸಿದರು.

ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮಕ್ಕೆ 10 ಗಂಟೆಗೆ ಆಹ್ವಾನ ಪತ್ರಿಕೆ ನೀಡುತ್ತಾರೆ. ಬಹುತೇಕ ಮಹಿಳಾ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಕೇವಲ ಆಹ್ವಾನ ಪತ್ರಿಕೆಯಲ್ಲಿ ಹೆಸರನ್ನು ಹಾಕಿ ಕಾರ್ಯಕ್ರಮಕ್ಕೆ ಬರಬಾರದು ಎಂಬ ಉದ್ದೇಶದಿಂದಲೇ ಆಹ್ವಾನ ಪತ್ರಿಕೆಯನ್ನು ಕೊನೆ ಗಳಿಗೆಯಲ್ಲಿ ಕೆಲವು ಸದಸ್ಯರಿಗೆ ನೀಡಿದ್ದು, ಇದು ಪೂರ್ವಯೋಜಿತವಾಗಿದೆ. ಕೇಳಲು ಹೋದಾಗ ಆಗಿರುವ ತಪ್ಪನ್ನು ಅಧಿಕಾರಿಗಳ ಮೇಲೆ ಶಾಸಕರು ಹಾಕುತ್ತಿದ್ದಾರೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.