ಪಾಂಡವಪುರ: ದೇಶದಲ್ಲಿ ಆರ್‌ಎಸ್‌ಎಸ್ ಸಂಘಟನೆಯನ್ನು ಬ್ಯಾನ್ ಮಾಡಲು ಯಾವುದೇ ಪಕ್ಷದಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಹೇಳಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಅವರು ಮಾತನಾಡಿ, ‘ಕಾಂಗ್ರೆಸ್‌ನವರಿಗೆ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಖಜಾನೆ ಖಾಲಿಯಾಗಿದ್ದು, ಸರ್ಕಾರಿ ನೌಕರರಿಗೂ ಸಂಬಳ ಕೊಡಲು ಹಣವಿಲ್ಲದ ಪರಿಸ್ಥಿತಿಯಾಗಿದೆ. ಜನ ಇದನ್ನು ಪ್ರಶ್ನೆ ಮಾಡುತ್ತಾರೆ ಎಂದು ವಿಷಯಾಂತರ ಮಾಡಲು ನಿಷೇಧ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ’ ಎಂದರು.
‘ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಬೇಕಾಗಿರಲಿಲ್ಲ. ಈಗ ಅದನ್ನು ಮಾಡುತ್ತಿದ್ದು, ಇದೀಗ ಆರ್‌ಎಸ್‌ಎಸ್ ನಿಷೇಧ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳುತ್ತಿದ್ದು, ಒಂದು ರಾಷ್ಟ್ರಿಯ ಪಕ್ಷದ ಅಧ್ಯಕ್ಷರ ಪುತ್ರರಾಗಿ, ಜವಾಬ್ದಾರಿಯುತ ಸಚಿವರಾಗಿ ಈ ರೀತಿ ಹೇಳಿಕೆ ಕೊಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ನಾಗಮಂಗಲ, ಮದ್ದೂರು ಹಾಗೂ ಕೆರಗೋಡು ಘಟನೆಗಳ ನಂತರ ಹಿಂದೂ ಸಮಾಜ ಜಾಗೃತಗೊಂಡಿದೆ’ ಎಂದು ಹೇಳಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದಿಂದ ಪ್ರಾರಂಭಗೊಂಡ ಪಥಸಂಚಲವು ವಿವಿಧ ಬೀದಿಗಳಲ್ಲಿ ಸಂಚರಿಸಿ ವಿ.ಸಿ.ಕಾಲೊನಿಯ ಶ್ರೀರಾಮಮಂದಿರ ಬಳಿ ಮುಕ್ತಾಯಗೊಂಡಿತು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಧನಂಜಯ, ಮುಖಂಡರಾದ ಜೆ.ಶಿವಲಿಂಗೇಗೌಡ, ಎಚ್.ಎನ್.ಮಂಜುನಾಥ್, ಆನಂದ್, ಶಂಭೂನಹಳ್ಳಿ ಮಂಜುನಾಥ್, ಚಿಕ್ಕಮರಳಿ ನವೀನ್, ಸಂದೇಶ್, ಮಾರ್ಕಂಡಯ್ಯ, ಡೇರಿ ರಾಮು, ಸೋಮಶೇಖರ್ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.