ಸಾಂಕೇತಿಕ ಚಿತ್ರ
ಮಂಡ್ಯ: ‘ಪೌತಿ ಖಾತೆ ಆಂದೋಲನ’ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ರಾಜ್ಯದಲ್ಲಿ ಬರೋಬ್ಬರಿ 37.56 ಲಕ್ಷ ಪಹಣಿಗಳು (ಆರ್.ಟಿ.ಸಿ) ಇನ್ನೂ ಮೃತರ ಹೆಸರಿನಲ್ಲೇ ಇವೆ!
ರಾಜ್ಯದಲ್ಲಿ 3,22,11,512 ಖಾತೆ ಜಮೀನುಗಳಿದ್ದು, ಇದರಲ್ಲಿ 1,36, 84,137 ಖಾತೆಗಳು ಮಾತ್ರ ‘ಫ್ರೂಟ್ ಐಡಿ’ ಹೊಂದಿವೆ. 2024ರ ಜನವರಿಯಿಂದ ಕಂದಾಯ ಇಲಾಖೆಯು ರಾಜ್ಯದಾದ್ಯಂತ ಆಂದೋಲನ ಕೈಗೊಂಡಿದ್ದರೂ ಪ್ರಗತಿ ಸಾಧಿಸಿಲ್ಲ. ಹೀಗಾಗಿ ರೈತರು ಕಚೇರಿಗಳಿಗೆ ಅಲೆದಾಡುವುದು ತಪ್ಪಿಲ್ಲ.
ತುಮಕೂರು (5.58 ಲಕ್ಷ), ಬೆಳಗಾವಿ (4.17 ಲಕ್ಷ) ಮತ್ತು ಮಂಡ್ಯ (3.23 ಲಕ್ಷ)–ಈ ಜಿಲ್ಲೆಗಳು ಮೃತರ ಹೆಸರಿನಲ್ಲಿ ಅತಿ ಹೆಚ್ಚು ಪಹಣಿ ಹೊಂದಿವೆ. ಧಾರವಾಡ (6,570) ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ (5,917) ಅತಿ ಕಡಿಮೆ ಪಹಣಿಗಳಿವೆ.
‘ಆಧಾರ್ ಸೀಡಿಂಗ್’ ಪ್ರಕ್ರಿಯೆ ಕೈಗೊಂಡ ನಂತರ ಇಷ್ಟೊಂದು ಜಮೀನಿನ ಪಹಣಿಗಳು ಮೃತರ ಹೆಸರಿನಲ್ಲಿವೆ ಎಂಬುದು ಗೊತ್ತಾಗಿವೆ. ಇದಕ್ಕೂ ಮುನ್ನ ಗ್ರಾಮ ಆಡಳಿತಾಧಿಕಾರಿ (ವಿ.ಎ.ಒ) ಮತ್ತು ಕಂದಾಯ ನಿರೀಕ್ಷಕರು (ಆರ್.ಐ) ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ಕೊಡುತ್ತಿದ್ದರಿಂದ, ಪಹಣಿಗಳ ಬಗ್ಗೆ ನಿಖರ ಅಂಕಿಅಂಶಗಳು ಗಮನಕ್ಕೆ ಬಂದಿರಲಿಲ್ಲ’ ಎನ್ನುತ್ತಾರೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು.
‘ಪೌತಿ ಖಾತೆ ಮಾಡಿಸಲು ತಾಲ್ಲೂಕು ಕಚೇರಿಗೆ ಹೋದರೆ ಗ್ರಾಮ ಆಡಳಿತಾಧಿಕಾರಿ ಇಲ್ಲಸಲ್ಲದ ದಾಖಲೆಗಳನ್ನು ಕೇಳಿ ರೈತರನ್ನು ತಿಂಗಳುಗಟ್ಟಲೆ ಅಲೆದಾಡಿಸುತ್ತಾರೆ. ಜಮೀನಿನ ಖಾತೆ ಮಾಡಿಕೊಡಲು ನಿಯಮಗಳು ಅಡ್ಡಿಬರುತ್ತವೆ ಎನ್ನುತ್ತಾರೆ. ಹಣ ಕೊಟ್ಟರೆ, ದಾಖಲೆಗಳ ಕೊರತೆ ಇದ್ದರೂ ಅವರೇ ಸರಿದೂಗಿಸಿ ಖಾತೆ ಮಾಡಿಕೊಡುತ್ತಾರೆ. ಅಧಿಕಾರಿಗಳ ಹಣದ ದಾಹದಿಂದಲೇ ಪೌತಿ ಖಾತೆ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ’ ಎನ್ನುತ್ತಾರೆ ಶ್ರೀರಂಗಪಟ್ಟಣದ ರೈತ ಮುಖಂಡ ಕಿರಂಗೂರು ಪಾಪು.
ಜಿಲ್ಲೆಯಲ್ಲಿ 2023ರ ಜುಲೈನಿಂದಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪೌತಿ ಖಾತೆ ಆಂದೋಲನ ನಡೆಸುತ್ತಿದ್ದು, ಸುಮಾರು 62 ಸಾವಿರ ಖಾತೆಗಳನ್ನು ಮಾಡಿದ್ದೇವೆಕುಮಾರ, ಜಿಲ್ಲಾಧಿಕಾರಿ, ಮಂಡ್ಯ
ಮರಣ ಪ್ರಮಾಣ ಪತ್ರ, ವಂಶವೃಕ್ಷ, ಪ್ರಸ್ತುತ ಆರ್‌ಟಿಸಿ ದಾಖಲೆಗಳನ್ನು ನಮೂನೆ 19ರ ಅರ್ಜಿಯೊಂದಿಗೆ ನಾಡ ಕಚೇರಿಗೆ ಸಲ್ಲಿಸಿದರೆ, 15 ದಿನಗಳಲ್ಲಿ ನೂತನ ಪಹಣಿ ಸಿಗುತ್ತದೆಶಿವಮೂರ್ತಿ, ಉಪವಿಭಾಗಾಧಿಕಾರಿ ಮಂಡ್ಯ
‘ರಾಜ್ಯದಲ್ಲಿ 37 ಲಕ್ಷ ಪಹಣಿಗಳು ಸತ್ತವರ ಹೆಸರಿನಲ್ಲೇ ಇವೆ. ಕಂದಾಯ ದಾಖಲೆಗಳ ನಿರ್ವಹಣೆ ಅಂದ್ರೆ ಇದೇನಾ? ಪೌತಿ ಖಾತೆ ಮಾಡಲು ಅಧಿಕಾರಿಗಳು ಏಕೆ ವಿಳಂಬ ಮಾಡುತ್ತಿದ್ದೀರಿ? ಈ ಜಮೀನುಗಳಿಗೆ ವಾರಸುದಾರರು ಯಾರು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಂಡ್ಯದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
‘ಕಂದಾಯ ನಿರೀಕ್ಷಕರು, ಶಿರಸ್ತೇದಾರ್, ತಹಶೀಲ್ದಾರ್ ಒಟ್ಟಾಗಿ ಸ್ಥಳ ಮಹಜರು ನಡೆಸಿ, ವಂಶವೃಕ್ಷ ಆಧರಿಸಿ ಪೌತಿ ಖಾತೆ ಮಾಡಿಕೊಡಿ. ಬದುಕಿರುವವರ ಹೆಸರಿನಲ್ಲಿ ಆರ್.ಟಿ.ಸಿ ಬರಲಿ. ವಿವಾದವಿದ್ದರೆ ಜಂಟಿ ಖಾತೆಯನ್ನಾದರೂ ಮಾಡಿಕೊಡಿ. ಆಗ ಜಮೀನಿಗೆ ವಾರಸುದಾರರು ಯಾರು ಎಂಬುದು ಲೆಕ್ಕ ಸಿಗುತ್ತದೆ’ ಎಂದು ತಾಕೀತು ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.