ADVERTISEMENT

ಶ್ರೀರಂಗಪಟ್ಟಣ | ಸಿಸಿ ವಾಹನಗಳ ತಡೆದ ಆರ್‌ಟಿಒ ಅಧಿಕಾರಿಗಳು: ಮಾಲೀಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 4:52 IST
Last Updated 10 ಅಕ್ಟೋಬರ್ 2025, 4:52 IST
ಶ್ರೀರಂಗಪಟ್ಟಣ ತಾಲ್ಲೂಕಿನ ಗೌಡಹಳ್ಳಿ ಗೇಟ್‌ ಬಳಿ, ವೈಲ್ಡ್‌ ಲೈಫ್‌ ಕಾರಿಡಾರ್ ಸಮೀಪ ಬಾಡಿಗೆ ವಾಹನಗಳನ್ನು ತಡೆದರು ಎಂಬ ಕಾರಣಕ್ಕೆ ವಾಹನಗಳ ಮಾಲೀಕರು ಗುರುವಾರ ಆರ್‌ಟಿಒ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಗೌಡಹಳ್ಳಿ ಗೇಟ್‌ ಬಳಿ, ವೈಲ್ಡ್‌ ಲೈಫ್‌ ಕಾರಿಡಾರ್ ಸಮೀಪ ಬಾಡಿಗೆ ವಾಹನಗಳನ್ನು ತಡೆದರು ಎಂಬ ಕಾರಣಕ್ಕೆ ವಾಹನಗಳ ಮಾಲೀಕರು ಗುರುವಾರ ಆರ್‌ಟಿಒ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು   

ಶ್ರೀರಂಗಪಟ್ಟಣ: ಕಾಂಟ್ರ್ಯಾಕ್ಟ್‌ ಕ್ಯಾರಿ (ಸಿಸಿ) ಪರ್ಮಿಟ್‌ ಬಾಡಿಗೆ ವಾಹನಗಳ ಮುಕ್ತ ಸಂಚಾರಕ್ಕೆ ಆರ್‌ಟಿಒ ಅಧಿಕಾರಿಗಳು ವಿನಾ ಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ವಾಹನಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಗೌಡಹಳ್ಳಿ ಗೇಟ್‌ ಸಮೀಪ, ವೈಲ್ಡ್‌ ಲೈಫ್‌ ಕಾರಿಡಾರ್‌ ಬಳಿ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ವೇ ನಲ್ಲಿ ಕಾಂಟ್ರ್ಯಾಕ್ಟ್‌ ಕ್ಯಾರಿ ಪರ್ಮಿಟ್‌ ಬಾಡಿಗೆ ವಾಹನಗಳನ್ನು ತಡೆದ ಅಧಿಕಾರಿಗಳನ್ನು ವಾಹನಗಳ ಮಾಲೀಕರು ತರಾಟೆಗೆ ತೆಗೆದುಕೊಂಡರು. ಒಂದೂವರೆ ತಾಸು ಅಧಿಕಾರಿಗಳು ಮತ್ತು ವಾಹನಗಳ ಮಾಲೀಕರ ನಡುವೆ ವಾಗ್ವಾದ ನಡೆಯಿತು.

‘ನಾಗಾಲ್ಯಾಂಡ್‌ ಮತ್ತು ದಿಯು–ದಾಮನ್‌ ನೋಂದಣಿ ಇರುವ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಿ ಕರ್ನಾಟಕ ನೋಂದಣಿ ಇರುವ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಬೆಂಗಳೂರಿನ ಉಮೇಶ್ ದೂರಿದರು.

ADVERTISEMENT

‘ಕರ್ನಾಟಕದ ಕೆಲವರು ನಾಗಲ್ಯಾಂಡ್‌ ಮತ್ತು ದಿಯು–ದಾಮನ್‌ ರಾಜ್ಯಗಳ ಹೆಸರಿನಲ್ಲಿ ನೋಂದಣಿ ಮಾಡಿಸುತ್ತಿದ್ದಾರೆ. ಆ ರಾಜ್ಯಗಳ ನೋಂದಣಿ ಸಂಖ್ಯೆ ಇರುವ ವಾಹನಗಳಿಗೆ ತೆರಿಗೆ ಇರುವುದಿಲ್ಲ ಎಂಬ ಕಾರಣಕ್ಕೆ ಈ ಹುನ್ನಾರ ನಡೆಯುತ್ತಿದೆ. ಇದರಿಂದ ಕರ್ನಾಟಕದ ಸಹಸ್ರಾರು ವಾಹನಗಳ ಮಾಲೀಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಚರ್ಚಿಸಲು ಮೈಸೂರಿನಲ್ಲಿ ಗುರುವಾರ ನಡೆಯುತ್ತಿದ್ದ ಸಭೆಗೆ ತೆರಳುವಾಗ ಅಧಿಕಾರಿಗಳು ಬೆನ್ನಟ್ಟಿ ಬಂದು ಹಿಡಿದಿದ್ದಾರೆ. ದುಡಿದು ತಿನ್ನುವ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ’ ಎಂದು ಮೈಸೂರಿನ ಕೌಶಿಕ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಬೆಂಗಳೂರು ಕಡೆಯಿಂದ ಮೈಸೂರಿಗೆ ಬರುತ್ತಿದ್ದ ಸಿಸಿ ವಾಹನಗಳ ಮಾಲೀಕರು ಮಂಡ್ಯಕ್ಕೆ ತೆರಳಿ ಆರ್‌ಟಿಒ ಜತೆ ಚರ್ಚೆ ನಡೆಸಿದೆವು. ಅವರಿಗೆ ವಾಸ್ತವಾಂಶ ಮನರಿಕೆ ಮಾಡಿಕೊಟ್ಟಿದ್ದೇವೆ’ ಎಂದು ಕೌಶಿಕ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.