
ಪ್ರಜಾವಾಣಿ ವಾರ್ತೆ
ಶ್ರೀರಂಗಪಟ್ಟಣ: ತಾಲ್ಲೂಕಿನ ಕೊಡಿಯಾಲ ಗ್ರಾಮದ ಸರ್‌ಎಂವಿ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಸಂಕ್ರಾಂತಿ ನಿಮಿತ್ತ ಏರ್ಪಡಿಸಿದ್ದ ಸುಗ್ಗಿ ಸಂಭ್ರಮದಲ್ಲಿ ರಾಶಿ ಮತ್ತು ಗೋ ಪೂಜೆ ನಡೆಯಿತು.
ಶಾಲೆಯ ಆವರಣವನ್ನು ತಳಿರು, ತೋರಣದಿಂದ ಸಿಂಗರಿಸಿ ಭತ್ತ ಮತ್ತು ರಾಗಿಯ ರಾಶಿಗೆ ಪೂಜೆ ಸಲ್ಲಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಸಿ. ಪುಟ್ಟಸ್ವಾಮಿ ಗೋ ಪೂಜೆ ನೆರವೇರಿಸಿದರು. ಪೋಷಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ನೆರೆದಿದ್ದವರಿಗೆ ಎಳ್ಳು ಮತ್ತು ಬೆಲ್ಲ ವಿತರಣೆ ಮಾಡಲಾಯಿತು.
ಇದೇ ವೇಳೆ ಸ್ವಾಮಿ ವಿವೇಕಾನಂದರ 163ನೇ ಜಯಂತಿಯನ್ನು ಆಚರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಜಯಂತಿ ವಿವೇಕಾನಂದರ ಜೀವನ ಮತ್ತು ಸಂದೇಶ ಕುರಿತು ಮಾತನಾಡಿದರು. ಸಿ.ಎಸ್. ಸ್ವರ್ಣ ಪುಟ್ಟಸ್ವಾಮಿ, ವಿಘ್ನೇಶ್ ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.