ADVERTISEMENT

ಮಂಡ್ಯ: ಮೈಷುಗರ್‌ ಉಳಿವಿಗೆ ಜನಾಂದೋಲನ ಆರಂಭ

ಖಾಸಗಿ ಗುತ್ತಿಗೆ, ಒ ಅಂಡ್‌ ಎಂ ವಿರುದ್ಧ ಕಾರ್ಖಾನೆ ವ್ಯಾಪ್ತಿಯ ಹಳ್ಳಿಗಳಲ್ಲಿ ಜನಜಾಗೃತಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 14:40 IST
Last Updated 24 ಜೂನ್ 2020, 14:40 IST
ಮೈಷುಗರ್‌ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು ಎಂದು ಒತ್ತಾಯಿಸಿ ಇಂಡುವಾಳು ಗ್ರಾಮದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಜನಾಂದೋಲನ ಆರಂಭಿಸಿದರು
ಮೈಷುಗರ್‌ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು ಎಂದು ಒತ್ತಾಯಿಸಿ ಇಂಡುವಾಳು ಗ್ರಾಮದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಜನಾಂದೋಲನ ಆರಂಭಿಸಿದರು   

ಮಂಡ್ಯ: ಮೈಷುಗರ್‌ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು, ಒ ಅಂಡ್‌ ಎಂ ಮಾಡಕೂಡದು ಎಂದು ಒತ್ತಾಯಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಬುಧವಾರ ತಾಲ್ಲೂಕಿನ ಇಂಡುವಾಳು ಗ್ರಾಮದಲ್ಲಿ ಜನಾಂದೋಲನ ಆರಂಭಿಸಿದರು

ಮೈಷುಗರ್‌ ಕಾರ್ಖಾನೆಯ ಮಹತ್ವ, ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು ಎನ್ನುವ ಕೂಗಿನ ಉದ್ದೇಶ ಕುರಿತಾದ ಕರಪತ್ರಗಳನ್ನು ಗ್ರಾಮಸ್ಥರಿಗೆ ಹಂಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮಂಡ್ಯಕ್ಕೆ ಸಕ್ಕರೆ ಜಿಲ್ಲೆ ಎಂಬ ಹೆಸರು ಬರಲು ಮೈಷುಗರ್‌ ಕಾರ್ಖಾನೆಯೇ ಕಾರಣವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌, ಲೆಸ್ಲಿ ಕೋಲ್ಮನ್‌, ಸರ್‌.ಎಂ.ವಿಶ್ವೇಶ್ವರಯ್ಯ ಅವರ ಮುಂದಾಲೋಚನೆಯೊಂದಿಗೆ ಕಾರ್ಖಾನೆ ಆರಂಭಗೊಂಡಿತು. 2033ನೇ ಇಸ್ವಿಗೆ ಕಾರ್ಖಾನೆಗೆ 100 ವರ್ಷ ತುಂಬುತ್ತದೆ. ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿದ ಕಾರ್ಖಾನೆ ಖಾಸಗಿ ವ್ಯಕ್ತಿಯ ಪಾಲಾಗಬಾರದು. ಸರ್ಕಾರವೇ ಕಾರ್ಖಾನೆಯನ್ನು ನಡೆಸಬೇಕು ಎಂದು ಸಮಿತಿಯ ಸದಸ್ಯರು ಒತ್ತಾಯಿಸಿದರು.

ADVERTISEMENT

ಕಾರ್ಖಾನೆ ಕಬ್ಬು ಅರೆಯುವ ಸ್ಥಿತಿಯಲ್ಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕರೇ ವರದಿ ನೀಡಿದ್ದಾರೆ. ಕಳೆದ ಸರ್ಕಾರಗಳ ಹಲವು ಮುಖ್ಯಮಂತ್ರಿಗಳು ಕಾರ್ಖಾನೆಯನ್ನು ಮುನ್ನಡೆಲು ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಾರ್ಖಾನೆಗೆ ಪುನಶ್ಚೇತನ ನೀಡಬೇಕು. ಕೆಲ ಸಣ್ಣಪುಟ್ಟ ದುರಸ್ತಿಯೊಂದಿಗೆ ಕಾರ್ಖಾನೆಗೆ ಮರುಜೀವ ನೀಡಬೇಕು. ಖಾಸಗಿ ಗುತ್ತಿಗೆಯಾಗಲೀ, ಖಾಸಗೀಕರಣದ ಭಾಗವೇ ಆದ ಒ ಅಂಡ್‌ ಎಂ ಮಾಡಬಾರದು ಎಂದು ಆಗ್ರಹಿಸಿದರು.

ಮೈಷುಗರ್‌ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯಿದೆ. ಅದನ್ನು ಕಾಪಾಡುವ ಹೊಣೆ ಈ ಭಾಗರದ ಜನರದ್ದಾಗಿದೆ. ಕೇವಲ ಕಬ್ಬು ಅರೆದರೆ ಸಾಕು ಎನ್ನುವ ಮನೋಭಾವ ಬೇಡ. ಯಾರಾದರೂ ಕಾರ್ಖಾನೆ ನಡೆಸಲಿ ಎನ್ನುವ ಮಾತು ಬಿಡಬೇಕು. ಕಾರ್ಖಾನೆ ನಡೆಸುವ ಎಲ್ಲಾ ಸಾಮರ್ಥ್ಯ ಸರ್ಕಾರಕ್ಕೆ ಇದೆ. ಇಚ್ಛಾಶಕ್ತಿ ತೋರುವಂತೆ ಸರ್ಕಾರವನ್ನು, ಜನಪ್ರತಿನಿಧಿಗಳನ್ನು ಒತ್ತಾಯಿಸಬೇಕು ಎಂದರು.

ಮೈಷುಗರ್‌ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಜನಾಂದೋಲನ ನಡೆಸಲಾಗುವುದು. ಒ ಅಂಡ್‌ ಎಂ ನಿಂದ ಆಗುವ ಅನ್ಯಾಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದರು.

ಸಮಿತಿಯ ಪದಾಧಿಕಾರಿಗಳಾದ ಸುನಂದಾ ಜಯರಾಂ, ಸಿ.ಕುಮಾರಿ, ಮಂಜುನಾಥ್‌, ಎಂ.ಬಿ.ಶ್ರೀನಿವಾಸ್‌, ಇಂಡುವಾಳು ಚಂದ್ರಶೇಖರ್‌, ಹೆಮ್ಮಿಗೆ ಚಂದ್ರಶೇಖರ್‌, ಯಶವಂತ್‌, ಕೆ.ಎಸ್‌.ಸುಧೀರ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.