ADVERTISEMENT

ಗೌಡಹಳ್ಳಿ ಶಾಲೆಗೆ ಕೈ ತೋಟವೇ ಮೆರುಗು!

ತಾಲ್ಲೂಕುಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ನಿರಂತರವಾಗಿ ಸಾಧನೆ

ಗಣಂಗೂರು ನಂಜೇಗೌಡ
Published 7 ಡಿಸೆಂಬರ್ 2018, 17:06 IST
Last Updated 7 ಡಿಸೆಂಬರ್ 2018, 17:06 IST
ಶ್ರೀರಂಗಪಟ್ಟಣ ತಾಲ್ಲೂಕು ಗೌಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದ ಕೈ ತೋಟದಲ್ಲಿ ತರಕಾರಿ ಬಿಡಿಸುತ್ತಿರುವ ವಿದ್ಯಾರ್ಥಿಗಳು
ಶ್ರೀರಂಗಪಟ್ಟಣ ತಾಲ್ಲೂಕು ಗೌಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದ ಕೈ ತೋಟದಲ್ಲಿ ತರಕಾರಿ ಬಿಡಿಸುತ್ತಿರುವ ವಿದ್ಯಾರ್ಥಿಗಳು   

ಶ್ರೀರಂಗಪಟ್ಟಣ: ತಾಲ್ಲೂಕಿನ ಗೌಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಭೌತಿಕ ಹಾಗೂ ಶೈಕ್ಷಣಿಕವಾಗಿ ಗಮನ ಸೆಳೆಯುತ್ತಿದೆ.

ಶಾಲೆಯ ವಿದ್ಯಾರ್ಥಿಗಳು ಕ್ಲಸ್ಟರ್‌ ಮತ್ತು ತಾಲ್ಲೂಕು ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ನಿರಂತರವಾಗಿ ಸಾಧನೆ ಮಾಡುತ್ತಾ ಬಂದಿದ್ದಾರೆ. 2017–18ನೇ ಸಾಲಿನ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯ ಕತೆ ಹೇಳುವ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ಕಲಿಕೋತ್ಸವದ ಓದುವ ಮತ್ತು ಬರೆಯು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸಿಕ್ಕಿದೆ. ರಸಪ್ರಶ್ನೆ ಇತರ ಸ್ಪರ್ಧೆಗಳಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ಪಡೆದಿದ್ದಾರೆ. ಕ್ಲಸ್ಟರ್‌ ಮಟ್ಟದ ಬಹುತೇಕ ಸ್ಪರ್ಧೆಗಳಲ್ಲಿ ಗೌಡಹಳ್ಳಿ ಶಾಲೆ ಮುಂಚೂಣಿಯಲ್ಲಿದೆ.

‘ಆಡುತ್ತ ಕಲಿ, ನೋಡುತ್ತ ತಿಳಿ’ ಎನ್ನುವ ಮಾತಿಗೆ ಪೂರಕವಾಗಿ ಶಾಲೆಯಲ್ಲಿ ಆಟೋಟಗಳ ಮೂಲಕ ಪಾಠ ಕಲಿಸುವುದು ವಿಶೇಷ. ಶಾಲೆಯ ಒಳಗೆ ಮಾತ್ರವಲ್ಲದೆ, ಹೊರಗಿನ ಪರಿಸರದಲ್ಲಿ ಮಕ್ಕಳನ್ನು ಕೂರಿಸಿ ಪಾಠ ಹೇಳಿಕೊಡುವ ಪರಿಪಾಠ ಇದೆ.

ADVERTISEMENT

ಆಕರ್ಷಕ ಕೈ ತೋಟ: ಗೌಡಹಳ್ಳಿ ಶಾಲೆಯ ‘ಶಾಲಾ ಕೈತೋಟ’ ಇತರ ಶಾಲೆಗಳ ಕೈತೋಟಗಳಿಗೆ ಮಾದರಿ ಎನ್ನುವಂತಿದೆ. ಶಾಲೆಯ ಆವರಣದಲ್ಲಿ ಹತ್ತಾರು ಬಗೆಯ ಸೊಪ್ಪು ಮತ್ತು ತರಕಾರಿಗಳನ್ನು ಬೆಳೆಯಲಾಗಿದೆ. ಹುರುಳಿಕಾಯಿ (ಬೀನ್ಸ್‌), ನುಗ್ಗಿ, ಮೂಲಂಗಿ, ಅವರೆ, ಟೊಮೆಟೋ ಇತರ ಕಾಯಿಪಲ್ಯೆ ಗಿಡಗಳು ಫಲ ಕೊಡುತ್ತಿವೆ. ಪಾಲಕ್‌, ಕೊತ್ತಂಬರಿ, ಸಬ್ಬಸಿಗೆ, ಮೆಂತ್ಯ ಇತರ ಸೊಪ್ಪುಗಳು ಸಮೃದ್ಧವಾಗಿ ಬೆಳೆದಿವೆ.

‘ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳೇ ಸೊಪ್ಪು ಮತ್ತು ತರಕಾರಿ ಬೆಳೆಸುತ್ತಾರೆ. ಮಧ್ಯಾಹ್ನದ ಬಿಸಿಯೂಟಕ್ಕೆ ಶಾಲೆ ಆವರಣದಲ್ಲಿ ಬೆಳೆದಿರುವ ಸೊಪ್ಪು ಮತ್ತು ತರಕಾರಿಗಳನ್ನೇ ಬಳಸುತ್ತೇವೆ. 5 ತೆಂಗಿನ ಮರಗಳು ಬಿಸಿಯೂಟಕ್ಕೆ ಬಳಸಿ ಮಿಗುವಷ್ಟು ಫಲ ಕೊಡುತ್ತಿವೆ. ನಮ್ಮ ಪರಂಗಿ (ಪಪ್ಪಾಯಿ) ಗಿಡಗಳ ಹಣ್ಣುಗಳನ್ನು ವಾರಕ್ಕೊಮ್ಮೆ ಮಕ್ಕಳಿಗೆ ಕೊಡುತ್ತಿದ್ದೇವೆ. ಮಕ್ಕಳಿಗೆ ಹಸಿರು ತರಕಾರಿ ಸಹಿತ ಪೌಷ್ಟಿಕ ಆಹಾರ ನೀಡಲಾಗುತ್ತಿದೆ’ ಎಂದು ಮುಖ್ಯ ಶಿಕ್ಷಕ ಪ್ರಕಾಶ್‌ ಹೇಳುತ್ತಾರೆ. ‘ಪ್ರತಿ ವರ್ಷ ಶಾಲಾ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯುತ್ತದೆ. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಗ್ರಾಮಸ್ಥರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಪ್ರೋತ್ಸಾಹ ಖುಷಿ ಕೊಡುತ್ತದೆ’ ಎಂದು ಅವರು ಖುಷಿ ವ್ಯಕ್ತಪಡಿಸುತ್ತಾರೆ.

‘ಗೌಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಭೌತಿಕ ಮತ್ತು ಶೈಕ್ಷಣಿಕ ಪ್ರಗತಿ ಯಾವ ಖಾಸಗಿ ಶಾಲೆಗಳಿಗೂ ಕಮ್ಮಿ ಇಲ್ಲ. ಎಲ್ಲ ಸರ್ಕಾರಿ ಶಾಲೆಗಳಲ್ಲೂ ಪ್ರತಿಭಾವಂತ ಶಿಕ್ಷಕರಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಸವಲತ್ತುಗಳನ್ನು ಪಡೆದುಕೊಳ್ಳಬೇಕು’ ಎಂಬುದು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಭಾನುಕುಮಾರ್‌ ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.