
ಸಂತೇಬಾಚಹಳ್ಳಿ: ಇಲ್ಲಿನ ಅಘಲಯ ಪ್ರೌಢಶಾಲೆಯಲ್ಲಿ ಮೂಲಸೌಕರ್ಯದ ಕೊರತೆ ಇದ್ದು, ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ಶಾಲೆಯಲ್ಲಿ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಇಲ್ಲ. ಶೌಚಾಲಯ, ರಸ್ತೆ ಸೇರಿ ಹಲವು ಸಮಸ್ಯೆಗಳಿಂದ ವಿದ್ಯಾರ್ಥಿಗಳು ನಲುಗುವಂತಾಗಿದೆ.
8 ಮಂದಿ ಶಿಕ್ಷಕರಿದ್ದು, 58 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶೇ 90ರಷ್ಟು ಫಲಿತಾಂಶ ದಾಖಲಿಸುತ್ತಿದ್ದರೂ ಸೌಲಭ್ಯ ಮಾತ್ರ ಮರೀಚಿಕೆ. ಈ ಶಾಲೆಗೆ ದೊಡ್ಡಸೋಮನಹಳ್ಳಿ, ನಾರಾಯಣಪುರ, ನಾಗರಘಟ್ಟ, ಹೊಸಹಳ್ಳಿ, ನಾಯಸಿಂಗನಹಳ್ಳಿ, ಚಿಕ್ಕಸೋಮನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಬರುತ್ತಾರೆ.
ಶಾಲೆ ಪ್ರಾರಂಭವಾದಾಗ ನಿರ್ಮಿಸಿರುವ ಶೌಚಾಲಯದ ಚಾವಣಿ ಕುಸಿದು ಬಿದ್ದಿದ್ದರೂ ಗ್ರಾಮ ಪಂಚಾಯಿತಿ, ಶಿಕ್ಷಣ ಇಲಾಖೆಯಿಂದ ದುರಸ್ತ ಆಗಿಲ್ಲ. ಹೆಣ್ಣು ಮಕ್ಕಳು ಶೌಚಾಲಯಕ್ಕೆ ಹೋಗಲು ತೊಂದರೆ ಎದುರಿಸುವಂತಾಗಿದೆ ಎಂದು ಪೋಷಕರು ದೂರುತ್ತಾರೆ.
‘ಶಾಲಾ ಆವರಣದಲ್ಲಿರುವ ಮರಗಳಿಗೆ ವಿದ್ಯುತ್ ತಂತಿ ತಾಕುತ್ತಿದ್ದು, ಕೆ.ಇ.ಬಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು ಕ್ರಮ ಕೈಗೊಂಡಿಲ್ಲ. ವಿದ್ಯುತ್ ತಂತಿ ತೆರವುಗೊಳಿಸದ ಕಾರಣ ಅಪಾಯ ಆಹ್ವಾನಿಸುತ್ತಿದೆ. ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಬೇಕು. ಅಗತ್ಯ ಮೂಲಸೌಕರ್ಯ ಕಲ್ಪಿಸಿದರೆ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗುತ್ತಾರೆ. ಆದರೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಪೋಷಕ ದೊಡ್ಡ ಸೋಮನಹಳ್ಳಿ ಶಂಭುಲಿಂಗೇಗೌಡ ದೂರುತ್ತಾರೆ.
‘ಶಾಲೆಗೆ ಸೌಲಭ್ಯ ಕಲ್ಪಿಸುವ ಸಂಬಂಧ ಪೋಷಕರನ್ನು ಸಭೆ ಕರೆದು ಹಲವು ಬಾರಿ ಮನವಿ ಮಾಡಿದೆವು. ಸಾರಿಗೆ ವ್ಯವಸ್ಥೆ ಕಲ್ಪಿಸಿದರೆ ಮಕ್ಕಳನ್ನು ಶಾಲೆಗೆ ಸೇರಿಸುತ್ತೇವೆ ಎಂದು ಪೋಷಕರು ಹೇಳುತ್ತಾರೆ. ಶೌಚಾಲಯಕ್ಕಾಗಿ ಗ್ರಾಮ ಪಂಚಾಯಿತಿ ಹಾಗೂ ಬಿಇಒ ಅವರಿಗೆ ಮನವಿ ಮಾಡಿದ್ದೇವೆ. ದಾನಿಗಳು ಬಸ್ ವ್ಯವಸ್ಥೆ ಮಾಡಿದರೆ ಮಕ್ಕಳಿಗೆ ಅನುಕೂಲವಾಗಲಿದೆ’ ಎಂದು ಮುಖ್ಯಶಿಕ್ಷಕ ಜಯರಂಗೇಗೌಡ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.