ADVERTISEMENT

ಮಂಡ್ಯ | ಪೌರಕಾರ್ಮಿಕರ ನಿಸ್ವಾರ್ಥ ಸೇವೆ ಅನನ್ಯ-ಜಿಲ್ಲಾಧಿಕಾರಿ

32 ಪೌರಕಾರ್ಮಿಕರನ್ನು ನೇರಪಾವತಿಯಡಿ ತರಲು ಕ್ರಮ: ಜಿಲ್ಲಾಧಿಕಾರಿ ಕುಮಾರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 4:44 IST
Last Updated 24 ಸೆಪ್ಟೆಂಬರ್ 2025, 4:44 IST
ಮಂಡ್ಯ ನಗರಸಭೆ ವತಿಯಿಂದ ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು 
ಮಂಡ್ಯ ನಗರಸಭೆ ವತಿಯಿಂದ ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು    

ಮಂಡ್ಯ: ‘ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿರಲು ಪೌರಕಾರ್ಮಿಕರು ಕಾರಣ. ಅವರ ಸೇವೆ ಅಳೆಯಲು ಸಾಧ್ಯವಿಲ್ಲ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.

ನಗರಸಭೆ ವತಿಯಿಂದ ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಸರ್ಕಾರ ಪೌರಕಾರ್ಮಿಕರಿಗೆ ಒದಗಿಸಿರುವ ಸೌಲಭ್ಯ ಹಾಗೂ ಸಂಬಳವನ್ನು ಅವರು ಮಾಡುವ ಸೇವೆಗೆ ಲೆಕ್ಕ ಹಾಕಲು ಸಾಧ್ಯವಿಲ್ಲ. ಪೌರಕಾರ್ಮಿಕರು ನಿಷ್ಕಲ್ಮಶ ಮತ್ತು ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಪೌರಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ಸೂಕ್ತವಾಗಿ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. ಪೌರಕಾರ್ಮಿಕರು ತಮ್ಮ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಕೆಲಸ ನಿರ್ವಹಿಸುವಾಗ ಸಮವಸ್ತ್ರ ಹಾಗೂ ಸುರಕ್ಷತಾ ಪರಿಕರಗಳನ್ನು ಧರಿಸಿ ಕಾರ್ಯನಿರ್ವಹಿಸಿ’ ಎಂದು ತಿಳಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಟಿ.ಎನ್‌. ನರಸಿಂಹಮೂರ್ತಿ ಮಾತನಾಡಿ, ‘ಪೌರಕಾರ್ಮಿಕರು ತಮಗೆ ಸರ್ಕಾರದಿಂದ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ತಿಳಿದುಕೊಳ್ಳಬೇಕು. ಗೃಹ ಭಾಗ್ಯ ಯೋಜನೆಯಡಿ ವಸತಿ ರಹಿತರಿಗೆ ನಿವೇಶನ ನೀಡಲಾಗುವುದು. ಪ್ರತಿ ತಿಂಗಳು ನಡೆಸಲಾಗುವ ಪೌರಕಾರ್ಮಿಕರ ಸಭೆಯಲ್ಲಿ ವಸತಿರಹಿತ ಪೌರಕಾರ್ಮಿಕ ಪಟ್ಟಿ ಪಡೆದುಕೊಂಡು ಕ್ರಮ ವಹಿಸಲಾಗುವುದು’ ಎಂದರು.

ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್ ಮಾತನಾಡಿದರು. 

ಪ್ರಶಸ್ತಿ ಪ್ರದಾನ:

ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಪೌರಕಾರ್ಮಿಕರಾಗಿ ಉತ್ತಮ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು. 

ನಗರಸಭೆ ಪೌರಾಯುಕ್ತೆ ಪಂಪಶ್ರೀ, ಉಪಾಧ್ಯಕ್ಷ ಎಂ.ಪಿ. ಅರುಣ್ ಕುಮಾರ್, ನಗರಸಭೆ ಸದಸ್ಯರಾದ ಶ್ರೀಧರ್, ರವಿ, ರಾಮಲಿಂಗಯ್ಯ, ಮಾಜಿ ಅಧ್ಯಕ್ಷ ಎಚ್.ಎಸ್ ಮಂಜು, ಕರ್ನಾಟಕ ರಾಜ್ಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಬಿ. ನಾಗಣ್ಣಗೌಡ, ಪೌರ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮುತ್ತಾಲಯ್ಯ ಉಪಸ್ಥಿತರಿದ್ದರು.

ಪೌರಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹಧನ ವಿತರಣೆ  350 ಪೌರಕಾರ್ಮಿಕರಿಗೆ ಸಿಹಿ ವಿತರಣೆ ವಸತಿರಹಿತರಿಗೆ ನಿವೇಶನ ನೀಡಲು ಕ್ರಮ 

‘ಆರೋಗ್ಯ ವಿಮೆ ಮಾಡಿಸಿಕೊಳ್ಳಿ’

‘ಪೌರಕಾರ್ಮಿಕರ ಹಿತಾಸಕ್ತಿ ಕಾಪಾಡಲು ಪ್ರತಿ ತಿಂಗಳು ಸಭೆ ನಡೆಸಲಾಗುತ್ತಿದೆ. ಪ್ರತಿಯೊಬ್ಬ ಪೌರಕಾರ್ಮಿಕರು ಆರೋಗ್ಯ ವಿಮೆ ಮಾಡಿಸಿಕೊಳ್ಳಿ. 32 ಪೌರಕಾರ್ಮಿಕರು ಪ್ರಸ್ತುತ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ನೇರ ಪಾವತಿ ಅಡಿಯಲ್ಲಿ ತರಲು ಸೂಕ್ತ ಕ್ರಮವನ್ನು ಶೀಘ್ರವಾಗಿ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಕುಮಾರ ಭರವಸೆ ನೀಡಿದರು. ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ 88 ಮನೆ ನಿರ್ಮಾಣ ಮಾಡಲಾಗಿದೆ. ಇನ್ನೂ 16 ಮನೆಗಳ ಕಾಮಗಾರಿ ಅಂತಿಮ ಹಂತದಲ್ಲಿ ಇದೆ. ಪೌರಕಾರ್ಮಿಕರು ಮೃತಪಟ್ಟರೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಕಾರ್ಯವನ್ನು ಶ್ರೀಘ್ರವಾಗಿ ನೀಡುತ್ತೇವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.