ADVERTISEMENT

ನಿಸ್ವಾರ್ಥ ಸೇವೆಗೆ ಸಮಾಜದಲ್ಲಿ ಗೌರವ: ವಿ.ಗೋಪಾಲಗೌಡ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 6:25 IST
Last Updated 20 ಅಕ್ಟೋಬರ್ 2025, 6:25 IST
ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸಮಾಜಮುಖಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು
ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸಮಾಜಮುಖಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು   

ಮಂಡ್ಯ: ‘ಸ್ವಾರ್ಥ ಬಿಟ್ಟು ನಿಸ್ವಾರ್ಥದಿಂದ ಸೇವೆ ಸಲ್ಲಿಸುವವರನ್ನು ಸಮಾಜ ಗೌರವಿಸುತ್ತದೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಬಸರಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುದ್ದನಘಟ್ಟ ಮಹಾಲಿಂಗೇಗೌಡ ಜನ್ಮದಿನದ ಅಂಗವಾಗಿ ಭಾನುವಾರ ನಡೆದ ಸಮಾಜಮುಖಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮತ್ತೊಬ್ಬರ ಕಣ್ಣೀರು ಒರೆಸಿ ಅವರ ನೆರವಿಗೆ ಬಂದರೆ ನಮಗೆ ಅರಿವಿಲ್ಲದೆಯೇ ಉನ್ನತ ಸ್ಥಾನಕ್ಕೇರುತ್ತೇವೆ, ಹಣ ಸಂಪಾದಿಸುವುದಷ್ಟೇ ಮುಖ್ಯವಲ್ಲ. ಅದನ್ನು ಸಮಾಜ ಸೇವೆಗೆ ಬಳಸುವ ಮೂಲಕ ಅಶಕ್ತರಿಗೆ ನೆರವಾಗಬೇಕು. ಅಂತಹ ಕೆಲಸವನ್ನು ಮಹಾಲಿಂಗೇಗೌಡ ಅವರು ಮಾಡಿಕೊಂಡು ಬರುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ ಮಾತನಾಡಿ, ‘ಮಹಾಲಿಂಗೇಗೌಡ ಅವರು ಉದ್ಯಮಿಗಳಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿರುವುದೇ ಒಂದು ಸಾಧನೆ. ಅಲ್ಲದೆ, ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಮೂಲಕ ಅವರಿಗೆ ಜೀವನಾಧಾರ ಕಲ್ಪಿಸಿರುವುದು ಹೆಮ್ಮೆಯ ಸಂಗತಿ’ ಎಂದರು.

ಉದ್ಯಮಿ ಮುದ್ದನಘಟ್ಟ ಮಹಾಲಿಂಗೇಗೌಡ ಮಾತನಾಡಿ, ‘ನನ್ನ ಜೀವನದಲ್ಲಿ ಸಮಾಜ ಸೇವೆಯನ್ನು ಮುಖ್ಯ ಗುರಿಯಾಗಿಸಿಕೊಂಡಿದ್ದೇನೆ, ಅದನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ರೈತರಿಗೆ ತೆಂಗಿನ ಸಸಿ ವಿತರಣೆ, ಒಂದು ಸಾವಿರ ಹೆಲ್ಮೆಟ್, ನಗರ ಪಶ್ಚಿಮ ಠಾಣೆ ಪೊಲೀಸರಿಗೆ ಜರ್ಕೀನ್‌, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. 50ಕ್ಕೂ ಹೆಚ್ಚು ಸಂಸ್ಥೆಗಳಿಂದ ಉದ್ಯೋಗ ಮೇಳ ನಡೆಯಿತು. ಪ್ರಗತಿಪರ ರೈತರಿಗೆ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಚಂದ್ರವನ ಆಶ್ರಮದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಅಂಗವಿಲಕರ ಅಧಿನಿಯಮದ ಮಾಜಿ ಆಯುಕ್ತ ರಾಜಣ್ಣ, ಮಾಜಿ ಶಾಸಕ ಸುರೇಶ್‌ಗೌಡ, ಮುಖಂಡರಾದ ರಾಘವೇಂದ್ರ, ಡಾ.ಇಂದ್ರೇಶ್‌, ಸಿದ್ದರಾಮಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.