ADVERTISEMENT

ಗವಿಮಠದಲ್ಲಿ ಶಮಿಪೂಜಾ, ತೆಪ್ಪೋತ್ಸವ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 4:41 IST
Last Updated 3 ಅಕ್ಟೋಬರ್ 2025, 4:41 IST
ಹಲಗೂರು ಸಮೀಪದ ಗವಿಮಠದಲ್ಲಿ ಶಮಿಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು 
ಹಲಗೂರು ಸಮೀಪದ ಗವಿಮಠದಲ್ಲಿ ಶಮಿಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು    

ಹಲಗೂರು: ಸಮೀಪದ ಡಿ.ಹಲಸಹಳ್ಳಿ ಬಳಿ ಇರುವ ಷಡಕ್ಷರದೇವ ಏಕದಳ ಬಿಲ್ವ ಶ್ರೀ ಕ್ಷೇತ್ರ ಗವಿ ಮಠದಲ್ಲಿ ಶಮಿಪೂಜಾ ಕಾರ್ಯಕ್ರಮ ಮತ್ತು ತೆಪ್ಪೋತ್ಸವ ಕಾರ್ಯಕ್ರಮ ಬುಧವಾರ ಬಹಳ ವಿಜೃಂಭಣೆಯಿಂದ ನೆರವೇರಿತು.

ಮಠದ ಹಿಂಭಾಗದಲ್ಲಿರುವ ಐತಿಹಾಸಿಕ ಬನ್ನಿ ಮರಕ್ಕೆ ಬೆಳಗಿನ ಜಾವ ವಿಶೇಷ ಪೂಜೆ ಸಲ್ಲಿಸಲಾಯಿತು‌. ನಂತರ ತೋಟಹಳ್ಳಿ ಮಠದ ಬಸವ ಪ್ರಭು ಮಹಾಸ್ವಾಮಿ ಅವರು ಬನ್ನಿ ಕತ್ತರಿಸಿ ಪೂಜೆ ಸಲ್ಲಿಸಿದರು. ಡಿ.ಹಲಸಹಳ್ಳಿ ಗ್ರಾಮದ ಮನೆ ಮಂಚಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಮಠಕ್ಕೆ ಕರೆತರಲಾಯಿತು.

ಮಠದ ಅವರಣದಲ್ಲಿರುವ ಕಟ್ಟೆಯಲ್ಲಿ ಮಳವಳ್ಳಿ ಅಂಬಿಗರ ಚೌಡಯ್ಯನ ಕೇರಿಯ ಯಜಮಾನರು ಮತ್ತು ಭಕ್ತಾಧಿಗಳು ತೆಪ್ಪೋತ್ಸವ ನಡೆಸಿಕೊಟ್ಟರು. ಡಿ.ಹಲಸಹಳ್ಳಿ, ಚೆನ್ನೀಪುರ, ಕೋಡಿಪುರ, ಬಾಣಸಮುದ್ರ, ತೊರೆಕಾಡನಹಳ್ಳಿ, ಬಸವನಪುರ, ಧನಗೂರು ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮದ ಸಾವಿರಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ಬೆಂಗಳೂರಿನ ವಾಸವಿ ಆಸ್ಪತ್ರೆ ವತಿಯಿಂದ ಹೃದಯ ತಪಾಸಣೆ, ಮೂಳೆ ಚಿಕಿತ್ಸೆ, ಮಧುಮೇಹ, ರಕ್ತದೊತ್ತಡ ಆರೋಗ್ಯ ತಪಾಸಣೆ, ಡಾ.ಅಗರ್ ವಾಲ್ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣಿನ ತಪಾಸಣೆ ಕಾರ್ಯಕ್ರಮ ನಡೆಯಿತು. ನೂರಾರು ಸಾರ್ವಜನಿಕರು ಭಾಗವಹಿಸಿ ಶಿಬಿರ ಸದ್ಬಳಕೆ ಮಾಡಿಕೊಂಡರು.

ADVERTISEMENT

ಈ ಸಂದರ್ಭದಲ್ಲಿ ತೋಟಹಳ್ಳಿ ಮಠದ ಶ್ರೀ ಬಸವ ಪ್ರಭು ಸ್ವಾಮಿಜೀ, ಗವಿ ಮಠದ ಶ್ರೀ ಷಡಕ್ಷರಿ ಸ್ವಾಮೀಜಿ, ಕುಂದೂರು ಮಠದ ಶ್ರೀ ನಂಜುಂಡ ಸ್ವಾಮಿಜೀ, ಹಣಕೊಳ ಮಠದ ಚಿದ್ಗನ ಶಿವಾಚಾರ್ಯ ಸ್ವಾಮಿ, ಹಂಗ್ರಾಪುರ ಬಸವಲಿಂಗ ಸ್ವಾಮಿಜೀ, ಸೇರಿದಂತೆ ವಿವಿಧ ಮಠದ ಸ್ವಾಮಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.