
ಮಂಡ್ಯ: ಜಿಲ್ಲೆಯಲ್ಲಿ ಸುಬ್ರಹ್ಮಣ್ಯಸ್ವಾಮಿ ಸೇರಿದಂತೆ ಸ್ಕಂದ ದೇವಾಲಯಗಳಲ್ಲಿ ಷಷ್ಠಿ ಪೂಜಾ ಕೈಂಕರ್ಯ ಹಾಗೂ ಹುತ್ತಕ್ಕೆ ತನಿ ಎರೆಯುವ ಮೂಲಕ ಬುಧವಾರ ಪೂಜೆ ಸಲ್ಲಿಸಿದರೆ, ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಲಡ್ಡು ಸಹಿತ ಅನ್ನಸಂತರ್ಪಣೆ ನಡೆಸಲಾಯಿತು.
ನಗರದ ಕೆರೆ ಬೀದಿಯಲ್ಲಿರುವ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಸ್ವಾಮಿಗೆ ಫಲ ಪಂಚಾಮೃತ ಪೂರ್ವಕ ಪವಮಾನ ಅಭಿಷೇಕ, ರುದ್ರಾಭಿಷೇಕ, ಬೆಣ್ಣೆ ಅಲಂಕಾರ ಮಾಡಿ ಮಹಾಮಂಗಳಾರತಿ ನೆರವೇರಿಸಲಾಯಿತು.
ಸುಬ್ರಹ್ಮಣ್ಯ ದೇವಾಲಯದಲ್ಲಿ ಪ್ರಾರ್ಥನೆಯೊಂದಿಗೆ ಗುರು ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ಮಹಾಸಂಕಲ್ಪ, ಕಳಶ ಸ್ಥಾಪನೆ, ನವಗ್ರಹಪೂರ್ವಕ ಮಹಾಗಣಪತಿ ಹೋಮ, ಕಾಳಸರ್ಪ ಶಾಂತಿ ಹೋಮ, ಸುಬ್ರಹ್ಮಣ್ಯ ಮೂಲಮಂತ್ರ ಹೋಮ ಮತ್ತು ಆಶ್ಲೇಷ ಬಲಿಪೂಜೆ ಹಾಗೂ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು.
ಕುವೆಂಪು ನಗರದ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೂ ವಿಶೇಷ ಪೂಜೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿಯೂ ವಿಶೇಷ ಪೂಜೆ ನಡೆಯಿತು. ಹೋಮ, ಹವನ, ಆಶ್ಲೇಷ ಬಲಿಪೂಜೆ, ಮಹಾಪೂರ್ಣಾಹುತಿ ಪೂಜೆಗಳು ನಡೆದವು. ಜಿಲ್ಲಾಧಿಕಾರಿ ಕಚೇರಿಯ ಎರಡೂ ಬದಿಯ ರಸ್ತೆಗಳು, ಜಿಲ್ಲಾ ಪಂಚಾಯಿತಿ ರಸ್ತೆ, ಆರ್.ಟಿ.ಒ. ರಸ್ತೆ ಸುತ್ತಮುತ್ತಲ ರಸ್ತೆಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿತ್ತು.
ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಸುಬ್ರಹ್ಮಣ್ಯ ದೇವಾಲಯದಲ್ಲಿ ಸಾಂಕೇತಿಕ ಪೂಜೆ ನಡೆಯಿತು. ತಾಲ್ಲೂಕಿನ ವಿವಿಧ ಗ್ರಾಮಗಳ ಶಿವನ ದೇವಾಲಯದಲ್ಲಿಯೂ ಪೂಜೆಗಳು ನಡೆದವು. ಅಲ್ಲಲ್ಲಿ ಇರುವ ಹುತ್ತಕ್ಕೆ ತನಿ ಎರೆಯುವ ಮೂಲಕ ಪೂಜೆ ಮಾಡಿದರೆ ಕೆಲವರು ಅನ್ನಸಂತರ್ಪಣೆ ನಡೆಸಿದರು. ಕೆಲವು ರೈತರು ಜಮೀನುಗಳಲ್ಲಿಯೇ ಪ್ರಸಾದ ತಯಾರಿಸಿ ಹುತ್ತಕ್ಕೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂದಿತು.