ADVERTISEMENT

ಮಂಡ್ಯ: ಪಿಯು ಕಾಲೇಜುಗಳಲ್ಲಿ ಶೌಚಾಲಯಗಳೇ ಇಲ್ಲ; ಗಿಡಗಂಟಿಯೊಳಗೆ ಮುಳುಗಿದ ಕಟ್ಟಡಗಳು

ಸ್ವಂತ ಕಟ್ಟಡಗಳಿಲ್ಲ; ಉಪನ್ಯಾಸಕರ ಕೊರತೆ...

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 4:11 IST
Last Updated 13 ಜೂನ್ 2022, 4:11 IST
ಅರಕೇಶ್ವರ ಬಡಾವಣೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶೌಚಾಲಯದ ದುಸ್ಥಿತಿ (ಎಡಚತ್ರ). ಮದ್ದೂರು ಪಿಯು ಕಾಲೇಜಿನ ದುಸ್ಥಿತಿ
ಅರಕೇಶ್ವರ ಬಡಾವಣೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶೌಚಾಲಯದ ದುಸ್ಥಿತಿ (ಎಡಚತ್ರ). ಮದ್ದೂರು ಪಿಯು ಕಾಲೇಜಿನ ದುಸ್ಥಿತಿ   

ಮಂಡ್ಯ: ಎಸ್ಸೆಸ್ಸೆಲ್ಸಿಯಲ್ಲಿ ದಾಖಲೆಯ ಫಲಿತಾಂಶ ಬಂದಿದ್ದು, ವಿದ್ಯಾರ್ಥಿಗಳು ಪಿಯುಸಿ ಸೇರ್ಪಡೆಗಾಗಿ ಉತ್ತಮ ಕಾಲೇ ಜುಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಆದರೆ, ಜಿಲ್ಲೆಯ ಬಹುತೇಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಮೂಲಸೌಲಭ್ಯಗಳಿಲ್ಲದೆ ನರಳುತ್ತಿವೆ. ಬಹುತೇಕ ಕಡೆ ಶೌಚಾಲಯಗಳೂ ಇಲ್ಲದಿರುವುದು ಸರ್ಕಾರಿ ಕಾಲೇಜುಗಳ ಸ್ಥಿತಿಗೆ ಕನ್ನಡಿ ಹಿಡಿದಂತಿದೆ.

ಪಿಯುಸಿ ಹಂತ ವಿದ್ಯಾರ್ಥಿ ಬದುಕಿನ ಪ್ರಮುಖ ಘಟ್ಟವಾಗಿದ್ದು, ಮುಂದಿನ ಭವಿಷ್ಯ ನಿರ್ಧರಿಸುತ್ತದೆ. ಅದಕ್ಕಾಗಿ ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಸೌಲಭ್ಯಗಳುಳ್ಳ ಖಾಸಗಿ ಕಾಲೇಜುಗಳಿಗೆ ಲಕ್ಷಾಂತರ ರೂಪಾಯಿ ಹಣ ಸುರಿದು ಕಳುಹಿಸುತ್ತಾರೆ. ಜಿಲ್ಲೆಯಾದ್ಯಂತ 169 ಸರ್ಕಾರಿ ಪಿಯು ಕಾಲೇಜುಗಳಿದ್ದು, ಬಹು ತೇಕ ಕಟ್ಟಡಗಳಲ್ಲಿ ಸೌಲಭ್ಯಗಳೇ ಇಲ್ಲ. ಹಲವೆಡೆ ಸ್ವಂತ ಕಟ್ಟಡ, ಕೊಠಡಿ ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ನಗರದ ಐತಿಹಾಸಿಕ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 1,500 ವಿದ್ಯಾರ್ಥಿನಿಯರು ಕಲಿಯು ತ್ತಿದ್ದಾರೆ. ಜಿಲ್ಲೆಯ ವಿವಿಧೆಡೆಯಿಂದ ಮಕ್ಕಳು ಬಂದು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಲೇಜಿನ ಶೌಚಾಲಯ ಸಮರ್ಪಕವಾಗಿಲ್ಲದೆ ವಿದ್ಯಾರ್ಥಿನಿಯರು ಸಮಸ್ಯೆ ಅನುಭವಿಸುತ್ತಿದ್ದಾರೆ.

ADVERTISEMENT

‘ಬಾಲಕಿಯರ ಶೌಚಾಲಯಕ್ಕೆ ಸಮರ್ಪಕವಾಗಿ ನೀರು ಸರಬರಾಜಾಗುವುದಿಲ್ಲ, ಸ್ವಚ್ಛತೆ ಇಲ್ಲ. ಕಾಲೇಜು ಆವರಣದಲ್ಲಿರುವ ಕುಡಿಯುವ ನೀರಿನ ಆರ್‌ಒ ಪ್ಲಾಂಟ್‌ ಹಾಳಾಗಿದ್ದು ಸರಿಪಡಿಸಿಲ್ಲ’ ಎಂದು ವಿದ್ಯಾರ್ಥಿನಿಯರು ದೂರುತ್ತಾರೆ. ಕಾಲೇಜಿಗೆ ಭದ್ರತೆಯೇ ಇಲ್ಲವಾಗಿದ್ದು, ಕಿಡಿಗೇಡಿಗಳು ಕಾಲೇಜು ಜಗುಲಿಯ ಮೇಲೆ ಬಂದು ಮಲಗುತ್ತಾರೆ.

ಗ್ರಾಮೀಣ ಕಾಲೇಜುಗಳ ಸ್ಥಿತಿ: ಗ್ರಾಮೀಣ ಭಾಗದ ಕಾಲೇಜುಗಳ ಸ್ಥಿತಿ ಶೋಚನೀಯವಾಗಿದ್ದು, ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿಗೆ ಶೌಚಾಲಗಳೇ ಇಲ್ಲವಾಗಿದೆ. ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 14 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿದ್ದು, ಬಹುತೇಕ ಕಾಲೇಜುಗಳಲ್ಲಿ ಮೂಲ ಸೌಲಭ್ಯದ ಕೊರತೆ ಎದ್ದು ಕಾಣುತ್ತದೆ.

ಕುಡಿಯುವ ನೀರು, ಶೌಚಾಲಯ, ಕಟ್ಟಡದ ಕೊರತೆ ಇದೆ. ಹೊಸಹೊಳಲು ರಸ್ತೆಯಲ್ಲಿರುವ ಪಿಯು ಕಾಲೇಜು ಮತ್ತು ಕರ್ನಾಟಕ ಪಬ್ಲಿಕ್ ಶಾಲೆಯ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಅತ್ಯಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಹೆಚ್ಚುವರಿ ಶೌಚಾಲಯ, ಕುಡಿಯುವ ನೀರಿನ ಘಟಕ, ಪ್ರತ್ಯೇಕ ಗ್ರಂಥಾಲಯ, ವ್ಯವಸ್ಥಿತ ಪ್ರಯೋಗಶಾಲೆಗಳು ಇಲ್ಲವಾಗಿವೆ. ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ವಿಶ್ರಾಂತಿ ಕೊಠಡಿ ಅವಶ್ಯವಿದೆ.

ತಾಲ್ಲೂಕಿನ ತೆಂಡೆಕೆರೆ ಪಿಯು ಕಾಲೇಜಿಗೆ ಇನ್ನೂ ಸ್ವಂತ ಕಟ್ಟಡವಿಲ್ಲ. ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಕೊಠಡಿಯಲ್ಲಿ ಪಿಯು ತರಗತಿ ನಡೆಯುತ್ತಿವೆ. ಇದು ದಾಖಲಾತಿ ಮೇಲೆ ಪರಿಣಾಮ ಬೀರಿದೆ. ಹೋಬಳಿ ಕೇಂದ್ರವಾಗಿರುವ ಸಂತೇಬಾಚಹಳ್ಳಿ ಪಿಯು ಕಾಲೇಜಿನಲ್ಲಿ ಶೌಚಾಲಯ, ಕುಡಿಯುವ ನೀರಿನ ಕೊರತೆ ಇದೆ. ಕಿಕ್ಕೇರಿ ಕಾಲೇಜುಗಳಲ್ಲಿ ಶೌಚಕ್ಕೆ ಬಾಲಕರು ಕೆರೆ ಬಯಲು ಆಶ್ರಯಿಸಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 7 ಸರ್ಕಾರಿ ಪಿಯು ಕಾಲೇಜುಗಳಿವೆ. ಈ ಪೈಕಿ ಮಹದೇವಪುರ ಸರ್ಕಾರಿ ಪಿಯು ಕಾಲೇಜಿಗೆ ಸ್ವಂತ ಕಟ್ಟಡ ಇಲ್ಲ. ಸರ್ಕಾರಿ ಪ್ರೌಢಶಾಲೆಯಲ್ಲಿ ತರಗತಿಗಳು ನಡೆಯುತ್ತಿವೆ. ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಇಂಗ್ಲಿಷ್ ಮತ್ತು ಗಣಿತ ವಿಷಯ ಬೋಧಿಸುವ ಉಪನ್ಯಾಸಕರಿಲ್ಲ. ಕಟ್ಟಡ ಕೂಡ ಶಿಥಿಲವಾಗಿದೆ. ತಾಲ್ಲೂಕಿನ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇದೆ.

ಮದ್ದೂರು ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 10 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿದ್ದು, ವಿವಿಧೆಡೆ ಉಪನ್ಯಾಸಕರ ಕೊರತೆ ಇದೆ. ಪಟ್ಟಣದ ಹೃದಯಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ಕೆಲವು ಭಾಗಗಳಲ್ಲಿ ಗಿಡಗಂಟಿ ಬೆಳೆದುಕೊಂಡಿದ್ದು ವಿದ್ಯಾರ್ಥಿಗಳು ವಿರಾಮದ ಸಂದರ್ಭದಲ್ಲಿ ಓಡಾಡಲು, ಆಟವಾಡಲು ಭಯಪಡುವ ಸ್ಥಿತಿ ಇದೆ.

ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಮತ್ತು ಹೊನ್ನಾವರ ಪಿಯು ಕಾಲೇಜಿನಲ್ಲಿ ಕೊಠಡಿ, ಶೌಚಾಲಯ ಸೇರಿ ಮೂಲ ಸೌಲಭ್ಯಗಳಿಲ್ಲ. ಜೊತೆಗೆ ತಾಲ್ಲೂಕಿನ ಬಹುತೇಕ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯೂ ಇದೆ. ಚೀಣ್ಯ ಕಾಲೇಜಿನಲ್ಲಿ ನೂತನವಾಗಿ ಕಟ್ಟಡ ನಿರ್ಮಾಣವಾಗಿ ವರ್ಷಗಳೇ ಕಳೆದರೂ ಕೊಠಡಿಗಳನ್ನು ಹಸ್ತಾಂತರ ಮಾಡಿಲ್ಲ. ಜೊತೆಗೆ ತಾಲ್ಲೂಕಿನ ಬೋಗಾದಿ ಪಿಯು ಕಾಲೇಜಿನಲ್ಲಿ ಶೌಚಾಲಯದ ಕೊರತೆ ಇದೆ. ಹಲವೆಡೆ ಪ್ರಯೋಗಾಲಯವಿದ್ದರೂ ಸುಸಜ್ಜಿತವಾಗಿಲ್ಲ.

ಮಳವಳ್ಳಿ ಪಟ್ಟಣದಲ್ಲಿ ಎರಡು ಪದವಿ ಪೂರ್ವ ಕಾಲೇಜುಗಳು, ತಳಗವಾದಿ, ಹಲಗೂರು, ಹಾಡ್ಲಿ, ಸರಗೂರು ಹ್ಯಾಂಡ್ ಪೋಸ್ಟ್, ದುಗ್ಗನಹಳ್ಳಿ, ಕಿರುಗಾವಲು ಗ್ರಾಮಗಳಲ್ಲಿ ಪಿಯು ಕಾಲೇಜುಗಳಿವೆ. ಮಳೆ ಬಂದ ಸಂದರ್ಭದಲ್ಲಿ ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಕೊಠಡಿಗಳಿಗೆ ನೀರು ನುಗ್ಗಿ ತೊಂದರೆ ಆಗುತ್ತಿದೆ. ಈ ವೇಳೆ ವಿದ್ಯಾರ್ಥಿನಿಯರಿಗೆ ರಜೆ ನೀಡಲಾಗುತ್ತದೆ.

ಅಲ್ಲದೇ ಪ್ರತ್ಯೇಕ ಪ್ರಯೋಗಾಲಯ ಇಲ್ಲದ ಕಾರಣ ತರಗತಿಯ ಕೊಠಡಿಯನ್ನೇ ಬಳಸಲಾಗುತ್ತಿದೆ. ಪ್ರಮುಖವಾಗಿ ವಾಣಿಜ್ಯಶಾಸ್ತ್ರ ಉಪ ನ್ಯಾಸಕರ ಕೊರತೆ ಇದೆ. ಜೊತೆಗೆ ದುಗ್ಗ ನಹಳ್ಳಿ, ತಳಗವಾದಿ, ಹಾಡ್ಲಿ ಸೇರಿದಂತೆ ತಾಲ್ಲೂಕಿನ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇದೆ.

ನಿರ್ವಹಣೆ: ಎಂ.ಎನ್‌.ಯೋಗೇಶ್‌.
ಪೂರಕ ಮಾಹಿತಿ: ಟಿ.ಕೆ.ಲಿಂಗರಾಜು, ಗಣಂಗೂರು ನಂಜೇಗೌಡ, ಅಶೋಕ್‌ ಕುಮಾರ್ ಎಂ.ಆರ್‌., ಉಲ್ಲಾಸ್‌ ಯು.ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.