ಬಿ.ಆರ್.ಪಾಟೀಲ್
ಮಂಡ್ಯ: ‘ಜೆಡಿಎಸ್‌ನಿಂದ ಬಂದ 8 ಶಾಸಕರಲ್ಲಿ ನಾನು ಒಬ್ಬ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದೇವೆ. ಕೆಲವರು ಮಂತ್ರಿಗಳಾಗಿದ್ದಾರೆ. ಸಿದ್ದರಾಮಯ್ಯ ಲಕ್ಕಿ. ಲಾಟರಿ ಹೊಡೆದು ಮುಖ್ಯಮಂತ್ರಿಯಾದ’ ಎಂದು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಹೇಳಿದರು.
ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಅಪಸ್ವರ ಎದ್ದಿದೆ ಎಂಬ ಕಾರಣಕ್ಕೆ ಪಕ್ಷದ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಬಂದಿದ್ದರು. ಶಾಸಕರ ನೋವು ಏನಿದೆ ಎಂದು ತಿಳಿದುಕೊಳ್ಳಲು ನಮ್ಮನ್ನೆಲ್ಲ ಕರೆಸಿದ್ದರು. ನಾನು 45 ನಿಮಿಷ ಮಾತನಾಡಿ ಎಲ್ಲ ಮಾಹಿತಿ ನೀಡಿದ್ದೇನೆ. ಗಂಭೀರವಾಗಿ ಪರಿಗಣಿಸಿದ್ದಾರೆ. ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ಅವರಿಗೆ ಬಿಟ್ಟದ್ದು’ ಎಂದರು.
‘ನನಗೆ ಸಿದ್ಧಾಂತವೇ ಗಾಡ್ ಫಾದರ್. ನಾನು ಹಾಗೂ ಸಿದ್ದರಾಮಯ್ಯ ರೈತ ಚಳವಳಿಯಿಂದ ಬಂದಿದ್ದೇವೆ. ರೈತ ನಾಯಕ ನಂಜುಂಡಸ್ವಾಮಿ ಹುರಿದುಂಬಿಸಲಿಲ್ಲ ಎಂದರೆ ಸಿದ್ದರಾಮಯ್ಯ ರಾಜಕೀಯಕ್ಕೆ ಬರುತ್ತಿರಲಿಲ್ಲ. ಕೆಲವರಿಗೆ ಗಾಡೂ ಇದ್ದಾರೆ, ಗಾಡ್‌ಫಾದರೂ ಇದ್ದಾರೆ’ ಎಂದು ಹೇಳಿದರು.
‘ಸಿಎಂ ಬದಲಾವಣೆ ಬಗ್ಗೆ ಮಾತನಾಡುವ ಶಕ್ತಿ ನನಗೆ ಇಲ್ಲ. ಅದೆಲ್ಲವೂ ಹೈಕಮಾಂಡ್‌ಗೆ ಬಿಟ್ಟಿದ್ದು. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವ ವಿಷಯ ನನಗೆ ಗೊತ್ತಿಲ್ಲ. ನಾಯಕತ್ವದ ವಿಚಾರದ ಬಗ್ಗೆ ಸುರ್ಜೇವಾಲ ಮಾತಾಡಿಲ್ಲ. ಸಿದ್ದರಾಮಯ್ಯ ಮೇಲೆ ಕೆಲ ವಿಚಾರದಲ್ಲಿ ಬೇಸರ ಇದೆ. ಅದನ್ನು ಹೇಳಿಕೊಂಡಿದ್ದೇವೆ’ ಎಂದು ತಿಳಿಸಿದರು.
ಮಂಡ್ಯ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದು ಬಿಟ್ಟ. ಸಿಎಂ ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಮೊದಲು ಭೇಟಿ ಮಾಡಿಸಿದವನು ನಾನು. ಅವನ ಗ್ರಹಚಾರ ಚೆನ್ನಾಗಿತ್ತು ಸಿಎಂ ಆದ’ ಎಂದು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಮೊಬೈಲ್ ಫೋನ್‌ನಲ್ಲಿ ಆಪ್ತರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೆ.ಆರ್.ಪೇಟೆಯಲ್ಲಿ ಕಾರ್ಯಕ್ರಮವೊಂದಕ್ಕೆ ಮಂಗಳವಾರ ಬಂದಿದ್ದ ಸಂದರ್ಭದಲ್ಲಿ ಆಪ್ತರೊಂದಿಗೆ ಮೊಬೈಲ್ ಫೋನ್‌ನಲ್ಲಿ ಮಾತನಾಡುವಾಗ ಈ ವಿಡಿಯೊ ಸೆರೆ ಹಿಡಿಯಲಾಗಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.