ADVERTISEMENT

ಸರ್ಕಾರವನ್ನು ಪ್ರಶ್ನಿಸಿದರೆ ಬಿಜೆಪಿಯಿಂದ ನೋಟಿಸ್‌: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 10:01 IST
Last Updated 31 ಜುಲೈ 2020, 10:01 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮಂಡ್ಯ: ‘ವೈದ್ಯಕೀಯ ಉಪಕರಣಗಳ ಖರೀದಿ ಹಗರಣದ ಬಗ್ಗೆ ನಾವು ಸರ್ಕಾರವನ್ನು ಪ್ರಶ್ನಿಸಿದ್ದೆವು. ನೋಟಿಸ್‌ ಕೊಡುವುದಾದರೆ ಸರ್ಕಾರದಿಂದ ಕೊಡಬೇಕಿತ್ತು. ಆದರೆ ವಿಧಾನ ಪರಿಷತ್‌ ಸದಸ್ಯ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಅವರಿಂದ ನೋಟಿಸ್‌ ಬಂದಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ಹೇಳಿದರು.

ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು ‘ನಾನು ಮುಖ್ಯಮಂತ್ರಿ ವಿರುದ್ಧ ನೇರವಾಗಿ ಭ್ರಷ್ಟಾಚಾರ ಆರೋಪ ಮಾಡಿದ್ದೆ. ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ವಿರುದ್ಧ ಆರೋಪ ಮಾಡಲಾಗಿತ್ತು. ಮುಖ್ಯಮಂತ್ರಿ, ಸಚಿವರು ನೋಟಿಸ್‌ ನೀಡಬಹುದಾಗಿತ್ತು. ಇಲ್ಲದಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೊಡಬೇಕಾಗಿತ್ತು. ಬಿಜೆಪಿಯಿಂದ ನೋಟಿಸ್‌ ಬಂದಿದೆ, ಆದರೆ ಪಕ್ಷದ ವಿರುದ್ಧ ನಾವು ಆರೋಪ ಮಾಡಿಯೇ ಇಲ್ಲ’ ಎಂದರು.

‘ಇಂತಹ ನೋಟಿಸ್‌ಗಳಿಗ ನಾವು ಹೆದರುವುದಿಲ್ಲ. ಎಂಥದೇ ಪರಿಸ್ಥಿತಿ ಬಂದರೂ ಅದನ್ನು ಧೈರ್ಯವಾಗಿ ಎದುರಿಸುತ್ತೇವೆ. ದುಡ್ಡು ಹೊಡೆಯುವುದನ್ನು, ಲೂಟಿ ಮಾಡುವವರನ್ನು ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ. ಕೊರೊನಾ ಅವಧಿಯಲ್ಲಿ ಮಾತನಾಡಬಾರದು, ಸರ್ಕಾರಕ್ಕೆ ಸಹಕಾರ ಕೊಡಬೇಕು ಎಂದು ಮೂರು ತಿಂಗಳು ಸುಮ್ಮನೆ ಕುಳಿತಿದ್ದೆವು. ಇನ್ನು ಮುಂದೆ ಸುಮ್ಮನಿರಲು ಸಾಧ್ಯವಿಲ್ಲ’ ಎಂದರು.‌‌

ADVERTISEMENT

ಕ್ರಿಮಿನಲ್‌ ಕೇಸ್‌ ಹಾಕಿದ್ದಾರೆ: ‘ಭ್ರಷ್ಟಾಚಾರದ ವಿರುದ್ಧ ಮಾತನಾಡೋಣ ಎಂದರೆ ವಿಧಾನಸಭೆ ಅಧಿವೇಶನವನ್ನೂ ಕರೆಯುತ್ತಿಲ್ಲ. ಬೀದಿಗಿಳಿದು ಹೋರಾಟ ಮಾಡೋಣವೆಂದರೆ ಕೊರೊನಾ ಸೋಂಕು ಕಾಡುತ್ತಿದೆ. ಈಚೆಗೆ ಸೈಕಲ್‌ ಜಾಥಾ ನಡೆಸಿದ್ದಕ್ಕೆ ನನ್ನ ಮೇಲೆ ಕ್ರಿಮಿನಲ್‌ ಕೇಸ್‌ ಹಾಕಿದ್ದಾರೆ. ಹಾಗಾದರೆ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಹೇಗೆ? ಅದಕ್ಕಾಗಿ ಮಾಧ್ಯಮ ಸಂವಾದದ ಮೂಲಕ ಜನರ ಬಳಿಗೆ ಹೋಗುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

‘ಸರ್ಕಾರವನ್ನು ಪ್ರಶ್ನಿಸಲು ಸಿದ್ದರಾಮಯ್ಯ ಯಾರು ಎಂದು ಸಚಿವ ಆರ್‌.ಅಶೋಕ್‌ ಕೇಳಿದ್ದಾರೆ. ಅಶೋಕ, ಸಂವಿಧಾನ ಓದಿಕೊಳ್ಳಲಿ, ಸಿದ್ದರಾಮಯ್ಯ ಮಾತ್ರವಲ್ಲ, ಯಾರು ಬೇಕಾದರೂ ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನೆ ಮಾಡಬಹುದು’ ಎಂದರು.

ನಾನು ಸಿಎಂ ಆಗಿದ್ದರೆ...

‘ಇಂತಹ ಸಂಕಷ್ಟ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದರೆ ರಾಜ್ಯದ ಒಂದು ಕೋಟಿ ಜನರಿಗೆ ತಲಾ ₹ 10 ಸಾವಿರ ಹಣ ವಿತರಣೆ ಮಾಡುತ್ತಿದ್ದೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ಬಡವರಿಗೆ ಸಹಾಯ ಮಾಡುವಂತೆ ಹಲವು ಪತ್ರ ಬರೆದಿದ್ದೇನೆ. ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ, ಮಾಹಿತಿ ನೀಡಲೂ ನಿರಾಕರಣ ಮಾಡುತ್ತಿದ್ದಾರೆ. ಚಾಲಕರು, ಶ್ರಮಿಕರಿಗೆ ಘೋಷಣೆ ಮಾಡಿರುವ ಪ್ಯಾಕೇಜ್‌ನಲ್ಲಿ ಶೇ 20ರಷ್ಟು ಮಂದಿಗೂ ಹಣ ತಲುಪಿಲ್ಲ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.