
ಶ್ರೀರಂಗಪಟ್ಟಣ: ‘ಭತ್ತ, ಕಬ್ಬು, ರಾಗಿ, ತರಕಾರಿ ಬೆಳೆಗಳಿಗೆ ಹೋಲಿಸಿದರೆ ರೇಷ್ಮೆ ಬೆಳೆಯಿಂದ ಅಧಿಕ ಲಾಭ ಸಿಗಲಿದೆ’ ಎಂದು ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಸಿಎಸ್‌ಆರ್‌ಟಿಐ)ಯ ಹಿರಿಯ ತಾಂತ್ರಿಕ ಸಹಾಯಕ ಜಸ್ಟೀನ್ ಕುಮಾರ್ ಹೇಳಿದರು.
ತಾಲ್ಲೂಕಿನ ಚೊಟ್ಟನಹಳ್ಳಿಯಲ್ಲಿ ರೇಷ್ಮೆ ಇಲಾಖೆ ಹಾಗೂ ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ದ್ವಿತಳಿ ರೇಷ್ಮೆ ಬೆಳೆ ಕ್ಷೇತ್ರೋತ್ಸವ ಹಾಗೂ ರೇಷ್ಮೆ ಬೆಳೆಗಾರರ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ‘ರೇಷ್ಮೆ ಕೃಷಿಯನ್ನು ವೈಜ್ಞಾನಿಕವಾಗಿ ಕೈಗೊಂಡರೆ ವರ್ಷದಲ್ಲಿ ಆರರಿಂದ ಏಳು ಬೆಳೆ ಪಡೆಯಬಹುದು. ರೇಷ್ಮೆಗೂಡಿಗೆ ನಿಖರವಾದ ಬೆಲೆ ಕೂಡ ಸಿಗಲಿದೆ. ಹಾಗಾಗಿ ರೈತರು ಸಾಂಪ್ರದಾಯಿ ಬೆಳೆಗೆ ಬದಲಾಗಿ ರೇಷ್ಮೆ ಬೆಳೆಯತ್ತ ಆಸಕ್ತಿ ವಹಿಸಬೇಕು’ ಎಂದು ಸಲಹೆ ನೀಡಿದರು.
ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸಿ.ಆರ್. ಕೃಷ್ಣ ಮಾತನಾಡಿ, ‘ರೇಷ್ಮೆ ಬೆಳೆಯಿಂದ ಅಲ್ಪ ಅವಧಿಯಲ್ಲಿ ಅಧಿಕ ಲಾಭ ಗಳಿಸಬಹುದು. ಆದರೆ ರೇಷ್ಮೆ ಬೆಳೆಗಾರರು ಪೀಡೆನಾಶಕ ಬಳಸುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ತಜ್ಞರ ಸೂಚನೆಗಳನ್ನು ಪಾಲಿಸಬೇಕು. ಸರ್ಕಾರದಿಂದ ಸಿಗುವ ಪ್ರಯೋಜನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷೆ ಪ್ರತಿಭಾ ಮಹಾದೇವ ಉದ್ಘಾಟಿಸಿದರು. ಉಪಾಧ್ಯಕ್ಷೆ ಸಿ.ಕೆ. ಇಂದಿರಾ, ಸದಸ್ಯೆ ಎಸ್.ಜೆ. ರಮ್ಯಾ, ರೇಷ್ಮೆ ನಿರೀಕ್ಷಕ ಸಿ. ವೆಂಕಟೇಶ್, ವಿಸ್ತರಣಾಧಿಕಾರಿ ಎಸ್.ಇ. ಮಂಗಪ್ಪ ಇದ್ದರು. ಮಂಡ್ಯ ಮಿಮ್ಸ್‌ನ ವೈದ್ಯಾಧಿಕಾರಿ ಡಾ.ಸಿದ್ದಲಿಂಗಪ್ಪ ಹೂಗಾರ್ ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.