ADVERTISEMENT

ಸರ್‌ ಎಂ.ವಿ ಪ್ರತಿಮೆ ಸ್ಥಾಪನೆ ವಿರೋಧಿಸಿ 16ಕ್ಕೆ ಸಿಎಂ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 13:05 IST
Last Updated 13 ಜೂನ್ 2020, 13:05 IST

ಮಂಡ್ಯ: ‘ಕೆಆರ್‌ಎಸ್‌ ಜಲಾಶಯದ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಪ್ರತಿಮೆಗೆ ಸಮನಾಂತರವಾಗಿ ಸರ್‌.ಎಂ.ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಿಸಬಾರದು ಎಂದು ಆಗ್ರಹಿಸಿ ಜೂನ್‌ 16ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು’ ಎಂದು ಇತಿಹಾಸ ತಜ್ಞ ಪ್ರೊ.ನಂಜರಾಜ ಅರಸು ಶನಿವಾರ ತಿಳಿಸಿದರು.

‘ವಿಶ್ವೇಶ್ವರಯ್ಯ ಅವರು ಕೆಆರ್‌ಎಸ್‌ ನಿರ್ಮಾಣ ಕಾಮಗಾರಿಯಲ್ಲಿ ಕೇವಲ ಒಂದು ವರ್ಷ (1911–1912) ಮುಖ್ಯ ಎಂಜಿನಿಯರ್‌ ಆಗಿದ್ದರು. ಮಹರಾಜರ ಪಕ್ಕ ಅಧಿಕಾರಿಯ ಪ್ರತಿಮೆ ಮಾಡಿದರೆ ಮಹರಾಜನಿಗೆ ಅಪಮಾನ ಮಾಡಿದಂತಾಗುತ್ತದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ವಿಶ್ವೇಶ್ವರಯ್ಯ ಅವರು ಶ್ರೇಷ್ಠ ತಂತ್ರಜ್ಞರಾಗಿದ್ದರು. ಅದರ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ. ಅವರಿಗೆ ಭಾರತರತ್ನ ಪ್ರಶಸ್ತಿ ಸಿಕ್ಕಿದೆ, ವಿಶ್ವರತ್ನ ಪ್ರಶಸ್ತಿಯನ್ನೇ ಕೊಡಲಿ, ನೊಬೆಲ್‌ ಪ್ರಶಸ್ತಿ ಸಿಗಲಿ, ಕೆಆರ್‌ಎಸ್‌ ಬಳಿಯೇ ಸರ್ದಾರ್‌ ವಲ್ಲಭಾ ಬಾಯ್‌ ಪಟೇಲ್‌ ಪ್ರತಿಮೆಗೂ ಎತ್ತರವಾದ ಪ್ರತಿಮೆ ನಿರ್ಮಿಸಲಿ. ಆದರೆ ನಾಲ್ವಡಿಯವರ ಪಕ್ಕದಲ್ಲಿ ವಿಶ್ವೇಶ್ವರಯ್ಯ ಪ್ರತಿಮೆ ಬರಬಾರದು’ ಎಂದರು.

ADVERTISEMENT

‘ನಾಲ್ವಡಿ ಅವರ ಪ್ರತಿಮೆಯನ್ನು ಮಾತ್ರ ಅನಾವರಣ ಮಾಡಬೇಕು ಎಂದು ಒತ್ತಾಯಿಸಿ ಹೋರಾಟ ರೂಪಿಸಲು ಏಕಪ್ರತಿಮೆ ಹೋರಾಟ ಸಮಿತಿ ರಚಿಸಲಾಗಿದೆ. ಮಂಡ್ಯ, ಮೈಸೂರು ಭಾಗದ ವಿವಿಧ ಸಂಘಟನೆಗಳ ಮುಖಂಡರು ಸಮಿತಿಯಲ್ಲಿ ಇದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.