ADVERTISEMENT

ಸರ್ಕಾರದಿಂದಲೇ ಕೋವಿಡ್‌ ಮೃತದೇಹಗಳ ಅಸ್ಥಿ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 12:54 IST
Last Updated 2 ಜೂನ್ 2021, 12:54 IST
ಸಚಿವರಾದ ಆರ್‌.ಅಶೋಕ್‌, ಕೆ.ಸಿ.ನಾರಾಯಣಗೌಡ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದರು
ಸಚಿವರಾದ ಆರ್‌.ಅಶೋಕ್‌, ಕೆ.ಸಿ.ನಾರಾಯಣಗೌಡ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದರು   

ಮಂಡ್ಯ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಸಾವಿರಕ್ಕೂ ಹೆಚ್ಚು ಮಂದಿಯ ಮೃತದೇಹಗಳ ಅಸ್ಥಿ ವಿಸರ್ಜನೆ ಕಾರ್ಯ ಬುಧವಾರ ಮಳವಳ್ಳಿ ತಾಲ್ಲೂಕು, ಬೆಳಕವಾಡಿ ಸಮೀಪದ ಕಾವೇರಿ ನದಿ ತೀರದಲ್ಲಿ ಸರ್ಕಾರದ ವತಿಯಿಂದಲೇ ನೆರವೇರಿತು.

ವಾರಸುದಾರರು ಇಲ್ಲದ ಮೃತದೇಹಗಳು, ಶವಸಂಸ್ಕಾರ ನಡೆಸಲು ಕುಟುಂಬ ಸದಸ್ಯರು ನಿರಾಕರಿಸಿದ ಮೃತದೇಹಗಳನ್ನು ಸರ್ಕಾರದದಿಂದಲೇ ಶವಸಂಸ್ಕಾರ ನೆರವೇರಿಸಲಾಗಿತ್ತು. ಕುಟುಂಬದ ಸದಸ್ಯರು ಅಸ್ಥಿಯನ್ನೂ ಪಡೆದಿರಲಿಲ್ಲ. ಹೀಗಾಗಿ ಕಾವೇರಿ ನದಿ ತೀರದಲ್ಲಿರುವ ಕಾಶಿವಿಶ್ವನಾಥಸ್ವಾಮಿ ದೇವಾಲಯದಲ್ಲಿ ಧಾರ್ಮಿಕ ವಿಧಿವಿಧಾನದೊಂದಿಗೆ ಅಸ್ಥಿ ವಿಸರ್ಜಿಸಲಾಯಿತು.

ಕಂದಾಯ ಸಚಿವ ಆರ್‌.ಅಶೋಕ್‌ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ.ಭಾನುಪ್ರಕಾಶ್‌ ಶರ್ಮಾ ಅವರ ನೇತೃತ್ವದಲ್ಲಿ ಅಸ್ಥಿ ವಿಸರ್ಜನೆ ಮಾಡಲಾಯಿತು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆರ್‌.ಅಶೋಕ್‌ ‘ಕೋವಿಡ್‌ ಅಲೆಯಲ್ಲಿ ಮಾನವೀಯತೆ ಮರೆಯಾಗಿದೆ. ಅಂತ್ಯಸಂಸ್ಕಾರಕ್ಕೆ ಕುಟುಂಬ ಸದಸ್ಯರೇ ನಿರಾಕರಿಸಿದ್ದಾರೆ. ಹಲವೆಡೆ ಶವಗಳನ್ನು ನದಿಗೆ ಎಸೆಯುತ್ತಿರುವ ಘಟನೆಗಳೂ ನಡೆದಿವೆ. ನಮ್ಮಲ್ಲಿ ಅಂತಹ ಪರಿಸ್ಥಿತಿ ಬರಬಾರದು ಎಂಬ ಕಾರಣಕ್ಕೆ ಸರ್ಕಾರದ ವತಿಯಿಂದಲೇ ಅಂತ್ಯಸಂಸ್ಕಾರ ಮಾಡಿ ಅಸ್ಥಿಯನ್ನೂ ವಿಸರ್ಜನೆ ಮಾಡಲಾಗುತ್ತಿದೆ’ ಎಂದರು.

‘ಮುಸ್ಲಿಂ, ಕ್ರಿಶ್ಚಿಯನ್‌ ಧರ್ಮಕ್ಕೆ ಸೇರಿದ ಮೃತದೇಹಗಳನ್ನು ಅವರ ಧರ್ಮದ ಸಂಪ್ರದಾಯದಂತೆ ಹೂಳಲಾಗಿದೆ. ದಹನ ಮಾಡಿದ ಹಿಂದೂಗಳ ಮೃತದೇಹದ ಅಸ್ಥಿಗಳನನ್ನು ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತಿದೆ’ ಎಂದರು.

ಸಂಖ್ಯೆಯಲ್ಲಿ ವ್ಯತ್ಯಾಸ: ಸಚಿವ ಆರ್‌.ಅಶೋಕ್‌ ಹಾಗೂ ಜ್ಯೋತಿಷಿ ಭಾನುಪ್ರಕಾಶ್‌ ಶರ್ಮಾ ಅವರು ಹೇಳಿದ ಅಸ್ಥಿಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡು ಬಂತು.

‘500 ಅಸ್ಥಿಗಳನ್ನು ವಿಸರ್ಜನೆ ಮಾಡಲಾಗಿದೆ’ ಎಂದು ಸಚಿವ ಆರ್‌.ಅಶೋಕ್‌ ತಿಳಿಸಿದರು. ‘ಸಾವಿರಕ್ಕೂ ಹೆಚ್ಚು ಹೆಸರುಗಳನ್ನು ಧಾರ್ಮಿಕ ವಿಧಾನದ ವೇಳೆ ಓದಲಾಯಿತು’ ಎಂದು ಜ್ಯೋತಿಷಿ ಡಾ.ಭಾನುಪ್ರಕಾಶ್‌ ಶರ್ಮಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.