ಕಿಕ್ಕೇರಿ: ಕನ್ನಡ ನಾಡು, ನುಡಿ, ಸಾಹಿತ್ಯ ಕೃಷಿಯನ್ನು ಗಟ್ಟಿಗೊಳಿಸಿದ ಜತೆಗೆ ಹುಟ್ಟೂರಿಗೆ ನೀರು ತಂದು ಭಗೀರಥರಾದವರು ಕಾದಂಬರಿಕಾರ ಎಸ್.ಎಲ್. ಭೈರಪ್ಪ ಎಂದು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಕೆಪಿಎಸ್ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್, ಸ್ಪಂದನಾ ಫೌಂಡೇಷನ್, ಆದರ್ಶ ಸುಗಮ ಸಂಗೀತಾ ಅಕಾಡೆಮಿ ಟ್ರಸ್ಟ್ ಶನಿವಾರ ಹಮ್ಮಿಕೊಂಡಿದ್ದ ‘ಎಸ್.ಎಲ್. ಭೈರಪ್ಪ ನುಡಿನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭೈರಪ್ಪ ಅವರು ಕಿಕ್ಕೇರಿಯ ಪ್ರೇಮಕವಿ ಕೆಎಸ್‌ನ ಒಡನಾಟ ಇಟ್ಟುಕೊಂಡು ಸಾಕಷ್ಟು ಬಾರಿ ಕಿಕ್ಕೇರಿಗೆ ಬಂದಿದ್ದಾರೆ. ಇವರ ಕಾದಂಬರಿ 14 ಭಾಷೆಗಳಿಗೆ ತರ್ಜುಮೆಯಾಗಿ ಇಡೀ ವಿಶ್ವಕ್ಕೆ ಕನ್ನಡ ನಾಡು ಪರಿಚಯವಾಗಿದೆ. ಹುಟ್ಟೂರು ಮರೆಯದ ಅಪರೂಪದ ಕಾದಂಬರಿಕಾರರು. ಇವರ ದಾಟು, ವಂಶವೃಕ್ಷ, ಯಾನ, ಉತ್ತರಕಾಂಡ, ಮತದಾನ, ಧರ್ಮಶ್ರೀ, ದಾಟು, ಗೃಹಭಂಗ ಸಾಹಿತ್ಯ ಕ್ಷೇತ್ರದ ಹೊಸ ಮೈಲಿಗಲ್ಲಾಗಿದೆ ಎಂದರು.
ಕೆಪಿಸಿಸಿ ಸದಸ್ಯ ಸುರೇಶ್ ಮಾತನಾಡಿ, ಭೈರಪ್ಪ ಎಂದರೆ ಅಸ್ಮಿತೆ. ಇಂತಹವರ ಪರಿಚಯ ಶಾಲಾ ಕಾಲೇಜು ಮಕ್ಕಳಿಗೆ ಮೊದಲು ಆಗಬೇಕಿದೆ. ಇಲ್ಲವಾದರೆ ಮೊಬೈಲ್ ಯುಗದಲ್ಲಿ ಕನ್ನಡ, ಸಾಹಿತ್ಯ, ಸಾಹಿತಿ ಎಲ್ಲವೂ ಮರೆಯಾಗಲಿದೆ. ಕನ್ನಡ, ಕನ್ನಡ ಶಾಲೆ ಉಳಿಯಲು ಮೊದಲು ಶ್ರೇಷ್ಠ ಸಾಹಿತಿಗಳ ಪರಿಚಯ ಮಾಡಿಕೊಡಲು ಶಿಕ್ಷಕ ವೃಂದ ಮುಂದಾಗಬೇಕಿದೆ ಎಂದರು.
ಎಸ್.ಎಲ್. ಭೈರಪ್ಪ ಭಾವಚಿತ್ರಕ್ಕೆ ಪುಷ್ಪನಮನ, ಗೀತನಮನ ಸಲ್ಲಿಸಲಾಯಿತು.
ಪ್ರಾಂಶುಪಾಲ ಸಹದೇವು, ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ಕೆಪಿಸಿಸಿ ಸದಸ್ಯ ಸುರೇಶ್, ಗಾಯಕ ನಗರ ಶ್ರೀನಿವಾಸ ಉಡುಪ, ಮುಖ್ಯಶಿಕ್ಷಕಿ ಮಮತಾ, ಭಾರತಿ, ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ನಿವೃತ್ತ ಪ್ರಾಂಶುಪಾಲ ಚಂದ್ರಮೋಹನ್, ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರೇಗೌಡ, ಮುಖಂಡರಾದ ಕೆ.ಟಿ. ತಿಮ್ಮೇಗೌಡ, ಮಹದೇವು, ಸಣ್ಣಪ್ಪ, ದಯಾನಂದ, ಉಪನ್ಯಾಸಕ ಕುಮಾರಸ್ವಾಮಿ, ವಿನಾಯಕ, ರವೀಂದ್ರ, ವಿನಾಯಕ ಹೆಗಡೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.