ADVERTISEMENT

ಕೊನೆಗೂ ತೆರವುಗೊಂಡ ಕೊಳಗೇರಿ ನಿವಾಸಿಗಳ ಅನಧಿಕೃತ ಗುಡಿಸಲುಗಳು

ವಸತಿನಿಲಯ ಕಾಮಗಾರಿ ಆರಂಭಕ್ಕೆ ಅಡ್ಡಿ ನಿವಾರಣೆ; ಪೊಲೀಸ್‌ ಭದ್ರತೆಯಲ್ಲಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 19:30 IST
Last Updated 18 ಫೆಬ್ರುವರಿ 2020, 19:30 IST
ಮಂಡ್ಯ ಸಂತೆಮಾಳದ ಗುಡಿಸಲು ತೆರವು ಕಾರ್ಯಾಚರಣೆ ವೇಳೆ ಮಹಿಳೆಯರು ಅಗತ್ಯ ವಸ್ತುಗಳನ್ನು ಕೊಂಡೊಯ್ದರು
ಮಂಡ್ಯ ಸಂತೆಮಾಳದ ಗುಡಿಸಲು ತೆರವು ಕಾರ್ಯಾಚರಣೆ ವೇಳೆ ಮಹಿಳೆಯರು ಅಗತ್ಯ ವಸ್ತುಗಳನ್ನು ಕೊಂಡೊಯ್ದರು   

ಮಂಡ್ಯ: ಹೊಳಲು ರಸ್ತೆಯಲ್ಲಿರುವ ಸಂತೆಮಾಳದ ಕೊಳಗೇರಿ ನಿವಾಸಿಗಳು ಮಂಗಳವಾರ ಕೊನೆಗೂ ಗುಡಿಸಲು ಖಾಲಿ ಮಾಡಿದರು. ಪೊಲೀಸ್‌ ಭದ್ರತೆಯೊಂದಿಗೆ ತಹಶೀಲ್ದಾರ್‌ ನಾಗೇಶ್‌ ನೇತೃತ್ವದಲ್ಲಿ ಅನಧಿಕೃವಾಗಿ ನಿರ್ಮಿಸಿಕೊಂಡಿದ್ದ ಗುಡಿಸಲು ತೆರವು ಮಾಡಲಾಯಿತು.

186/ಅ ಸರ್ವೆ ನಂಬರ್‌ ಜಾಗದಲ್ಲಿ ಕೊಳೆಗೇರಿ ನಿವಾಸಿಗಳು ಕಳೆದ 30 ವರ್ಷಗಳಿಂದಲೂ ವಾಸಿಸುತ್ತಿದ್ದರು. ಅದೇ ಜಾಗದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿ ಗೃಹ ನಿರ್ಮಾಣಕ್ಕೆ 5 ಗುಂಟೆ ಜಾಗ ಮಂಜೂರು ಮಾಡಿದ್ದ ಕಾರಣ ಗುಡಿಸಲು ತೆರವು ಅನಿವಾರ್ಯವಾಗಿತ್ತು. ಆದರೆ ನಿವಾಸಿಗಳು ಹಾಗೂ ಕೆಲ ನಗರಸಭೆ ಸದಸ್ಯರ ವಿರೋಧದಿಂದಾಗಿ ತೆರವು ಕಾರ್ಯಾಚರಣೆ ನನೆಗುದಿಗೆ ಬಿದ್ದಿತ್ತು. ಹಾಸ್ಟೆಲ್‌ ನಿರ್ಮಾಣದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳವಾರ ಗುಡಿಸಲು ತೆರವು ಕಾರ್ಯಾಚರಣೆ ನಡೆಸಲಾಯಿತು.

ಮಂಗಳವಾರ ಬೆಳಿಗ್ಗೆ ತೆರವು ಕಾರ್ಯಾಚರಣೆಗೆ ಬಂದ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳೀಯ ನಿವಾಸಿಗಳು ಹಾಗೂ ಕೆಲವು ನಗರಸಭೆ ಅಧಿಕಾರಿಗಳು ಪ್ರತಿರೋಧ ವ್ಯಕ್ತಪಡಿಸಿದರು. ಮತ್ತಷ್ಟು ಸಮಯ ನೀಡಬೇಕು ಎಂದು ಒತ್ತಾಯಿಸಿದರು. ಅವರ ಮನವಿಗೆ ಸೊಪ್ಪು ಹಾಕದ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದರು. ಸಾಕಷ್ಟು ಬಾರಿ ನೋಟಿಸ್‌ ನೀಡಿದ್ದರೂ ತೆರವುಗೊಳಿಸಲು ವಿಫಲರಾಗಿದ್ದ ಕಾರಣ ಅನಿವಾರ್ಯವಾಗಿ ತೆರವು ಕಾರ್ಯಾಚರಣೆ ನಡೆಸಿದರು.

ADVERTISEMENT

ನಿವಾಸಿಗಳಿಗೆ ಈಗಾಗಲೇ ನಿವೇಶನ ಹಂಚಿಕೆ ಮಾಡಲಾಗಿದೆ. ನಿವೇಶನ ಪಡೆದ ಮೇಲೂ ಗುಡಿಸಲು ಖಾಲಿ ಮಾಡದಿರುವುದು ಸರಿಯಲ್ಲ. ಸರ್ಕಾರದಿಂದ ಮಂಜೂರಾಗಿರುವ ಸ್ಥಳದಲ್ಲಿ ಮನೆ ನಿರ್ಮಿಸಿಕೊಳ್ಳುವಂತೆ ನಿವಾಸಿಗಳ ಮನವೊಲಿಸಿದರು. ಗುಡಿಸಲು ಖಾಲಿ ಮಾಡಲು ಕೆಲ ಸಮಯ ನೀಡಿದ ಸಿಬ್ಬಂದಿ ನಂತರ ತೆರವು ಕಾರ್ಯ ಆರಂಭಿಸಿದರು.

‘ರಾಜ್ಯ ಮುಕ್ತ ವಿವಿ ಕಟ್ಟಡದ ಹಿಂಭಾಗದಲ್ಲಿ ನಿವೇಶನ ನೀಡಿದ್ದಾರೆ. ಆದರೆ ಮನೆ ಕಟ್ಟಿಕೊಳ್ಳಲು ಹಣವಿಲ್ಲದ ಕಾರಣ ಇಲ್ಲೇ ವಾಸಿಸುತ್ತಿದ್ದೆವು. ಈಗ ಏಕಾಏಕಿ ಬಂದು ಮನೆ ಖಾಲಿ ಮಾಡಿ ಎನ್ನುತ್ತಿದ್ದಾರೆ. ಬೇರೆ ದಾರಿ ಇಲ್ಲದೆ ಗುಡಿಸಲು ಬಿಚ್ಚಿ ವಸ್ತುಗಳನ್ನು ಕೊಂಡೊಯ್ಯುತ್ತಿದ್ದೇನೆ’ ಎಂದು ನಿವಾಸಿ ರಾಜು ತಿಳಿಸಿದರು.

ಧಾವಂತ: ಅಧಿಕಾರಿಗಳು ಮತ್ತೊಂದು ಅವಕಾಶ ನೀಡುವುದಿಲ್ಲ ಎಂದು ಗೊತ್ತಾದೊಡನೆ ನಿವಾಸಿಗಳು ಗುಡಿಸಲಿನಲ್ಲಿನ ಗೃಹೋಪಯೋಗಿ ವಸ್ತುಗಳನ್ನು ಧಾವಂತದಿಂದ ಕೊಂಡೊಯ್ದರು. ಮಕ್ಕಳು, ಮಹಿಳೆಯರು ಅವಶ್ಯ ವಸ್ತುಗಳನ್ನು ಚೀಲದಲ್ಲಿ ತುಂಬಿಕೊಂಡು ಹೋಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಸಾಕಷ್ಟು ನೋಟಿಸ್‌ ಕೊಟ್ಟರೂ ವಸ್ತುಗಳನ್ನು ಕೊಂಡೊಯ್ಯದ ಜನರು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಿದಂತಾಗಿತ್ತು.

ಜಿಲ್ಲಾಡಳಿತದ ವತಿಯಿಂದ 2017ರ ಏ.3ರಂದು ವಸತಿಗೃಹಕ್ಕೆ ಜಾಗ ಗುರುತಿಸುವಂತೆ ಸೂಚನೆ ನೀಡಲಾಗಿತ್ತು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ 2018ರ ಜ.18ರಂದು ತಹಶೀಲ್ದಾರ್‌ ಅವರಿಗೆ ಮನವಿ ಮಾಡಿದ್ದರು. ಅದರಂತೆ ತಹಶೀಲ್ದಾರ್‌ ಅವರು ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ 2018ರ ಫೆ.13 ರಂದು ಪತ್ರ ಬರೆದು 5ಗುಂಟೆ ಜಮೀನನ್ನು ಅಳತೆ ಮಾಡಿ ಗುರುತಿಸಿಕೊಡುವಂತೆ ಎಂದು ಪತ್ರ ಬರೆದಿದ್ದರು.

ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ 25ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ರಾಜಸ್ವ ನಿರೀಕ್ಷಕ ಜಗದೀಶ್‌, ಗ್ರಾಮ ಲೆಕ್ಕಾಧಿಕಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.