ADVERTISEMENT

ಸಮೀಕ್ಷೆ: ಮಂಡ್ಯ ಜಿಲ್ಲೆಗೆ ಅಗ್ರಸ್ಥಾನ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ‘ಸಕ್ಕರೆ ನಾಡು’ ಶೇ 98.03ರಷ್ಟು ಪ್ರಗತಿ

ಸಿದ್ದು ಆರ್.ಜಿ.ಹಳ್ಳಿ
Published 22 ಅಕ್ಟೋಬರ್ 2025, 4:46 IST
Last Updated 22 ಅಕ್ಟೋಬರ್ 2025, 4:46 IST
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರುವ ದೃಶ್ಯ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರುವ ದೃಶ್ಯ   

ಮಂಡ್ಯ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯಲ್ಲಿ ಮಂಡ್ಯ ಜಿಲ್ಲೆಯು ಶೇ 98.03ರಷ್ಟು ಪ್ರಗತಿ ಸಾಧಿಸಿದ್ದು, ರಾಜ್ಯದ 31 ಜಿಲ್ಲೆಗಳ ಪೈಕಿ ಅಗ್ರಸ್ಥಾನ ಗಳಿಸಿದೆ.  

ಮಂಡ್ಯ ಜಿಲ್ಲೆಯಲ್ಲಿ 5,04,016 ಒಟ್ಟು ಕುಟುಂಬಗಳಿದ್ದು, 18,66,350 ಜನಸಂಖ್ಯೆಯಿದೆ. ಇದುವರೆಗೆ 18,29,582 ಮಂದಿಯನ್ನು ಸಮೀಕ್ಷೆ ಮಾಡಲಾಗಿದ್ದು, ಶೇ 98.03ರಷ್ಟು ಪ್ರಗತಿ ಸಾಧಿಸಲಾಗಿದೆ. 

ತುಮಕೂರು (ಶೇ 97.03) ಮತ್ತು ಚಿಕ್ಕಮಗಳೂರು (ಶೇ 96.02) ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಚಿತ್ರದುರ್ಗ, ಹಾವೇರಿ, ದಾವಣಗೆರೆ ಜಿಲ್ಲೆಗಳು ಕ್ರಮವಾಗಿ 4ರಿಂದ 6ನೇ ಸ್ಥಾನದಲ್ಲಿವೆ. ಕೋಲಾರ (83.72), ಬೀದರ್‌ (ಶೇ 83.32), ಯಾದಗಿರಿ (ಶೇ 83.02), ಬಳ್ಳಾರಿ (ಶೇ 82.19), ಧಾರವಾಡ (ಶೇ 80.96) ಈ ಐದೂ ಜಿಲ್ಲೆಗಳು ಕಡೆಯ ಸ್ಥಾನದಲ್ಲಿವೆ. 

ADVERTISEMENT

ರಾಜ್ಯದ 31 ಜಿಲ್ಲೆಗಳಲ್ಲಿ 1.48 ಕೋಟಿ ಕುಟುಂಬಗಳಿದ್ದು, ಇದರಲ್ಲಿ 1.43 ಕೋಟಿ ಕುಟುಂಬಗಳನ್ನು ಸಮೀಕ್ಷೆ ಮಾಡಲಾಗಿದೆ. 6.14 ಕೋಟಿ ಜನಸಂಖ್ಯೆಯಲ್ಲಿ ಇದುವರೆಗೆ 5.43 ಕೋಟಿ ಮಂದಿಯನ್ನು ಸಮೀಕ್ಷೆ ಮಾಡಲಾಗಿದ್ದು, ಶೇ 88.03ರಷ್ಟು ಪ್ರಗತಿಯಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಜಾಲತಾಣದಲ್ಲಿ ಮಾಹಿತಿ ಲಭ್ಯವಾಗಿದೆ. 

4,651 ಸಮೀಕ್ಷೆದಾರರ ನೇಮಕ:

ಈ ಸಮೀಕ್ಷೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಮಂಡ್ಯ ನಗರದ ವಾಡ್೯ ನಂ.20ರಲ್ಲಿರುವ ಬಸವರಾಜು ಎಚ್.ಸಿ ಅವರ ಮನೆಯಿಂದ ಸೆ.22ರಂದು ಚಾಲನೆ ನೀಡಿದ್ದರು. ಮಂಡ್ಯ ಜಿಲ್ಲೆಯಲ್ಲಿ 5,04,016 ಕುಟುಂಬಗಳಿದ್ದು, 4,651 ಸಮೀಕ್ಷೆದಾರರನ್ನು ನಿಯೋಜಿಸಲಾಗಿದೆ. ಒಬ್ಬ ಗಣತಿದಾರರಿಗೆ 120 ಕುಟುಂಬಗಳಂತೆ ಬ್ಲಾಕ್ ಹಂಚಿಕೆ ಮಾಡಲಾಗಿದೆ. 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. 

ಅ.31ರವರೆಗೆ ವಿಸ್ತರಣೆ:

ಸೆಪ್ಟೆಂಬರ್‌ 22ರಿಂದ ಅಕ್ಟೋಬರ್‌ 7ರೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಒಟ್ಟು 16 ದಿನಗಳ ಗಡುವು ನೀಡಲಾಗಿತ್ತು. ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳದ ಕಾರಣ ಸರ್ಕಾರ ಮತ್ತೆ ಅ.18ರವರೆಗೆ ದಿನಾಂಕ ವಿಸ್ತರಿಸಿತ್ತು. ಮತ್ತೆ ಅ.31ರವರೆಗೆ ಸಮೀಕ್ಷೆ ಅವಧಿಯನ್ನು ಮುಖ್ಯಮಂತ್ರಿಯವರು ವಿಸ್ತರಣೆ ಮಾಡಿದ್ದಾರೆ. ದಸರಾ ರಜೆ ಕಳೆದು ಶಾಲೆಗಳು ಆರಂಭವಾಗಿರುವ ಕಾರಣ ಮುಂದಿನ 9 ದಿನ ನಡೆಯಲಿರುವ ಸಮೀಕ್ಷಾ ಕಾರ್ಯದಲ್ಲಿ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳದಿರಲು ತೀರ್ಮಾನಿಸಲಾಗಿದೆ. 

ಕುಮಾರ ಜಿಲ್ಲಾಧಿಕಾರಿ
ಮಂಡ್ಯ ಜಿಲ್ಲೆ ಅಗ್ರಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ. ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರ ಪರಿಶ್ರಮದಿಂದ ಸಮೀಕ್ಷೆಯಲ್ಲಿ 98.03ರಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಿದೆ
ಕುಮಾರ ಜಿಲ್ಲಾಧಿಕಾರಿ ಮಂಡ್ಯ

ಸಮೀಕ್ಷೆ ಪ್ರಗತಿ: ಟಾಪ್‌ ಟೆನ್‌ ಜಿಲ್ಲೆಗಳ ವಿವರ 

ಜಿಲ್ಲೆ; ಒಟ್ಟು ಕುಟುಂಬ;ಒಟ್ಟು ಜನಸಂಖ್ಯೆ; ಶೇಕಡಾವಾರು ಪ್ರಗತಿ

1.ಮಂಡ್ಯ;5,04,016;18,66,350;98.03

2.ತುಮಕೂರು;7,96,669;28,16,759;97.03

3. ಚಿಕ್ಕಮಗಳೂರು;3,15,464;11,33,853;96.02

4.ಚಿತ್ರದುರ್ಗ;4,54,736;18,80,091;95.51

5.ಹಾವೇರಿ;4,18,516;18,49,411;94.66

6.ದಾವಣಗೆರೆ;4,91,946;18,29,756;93.02

7.ಕೊಪ್ಪಳ;3,26,003;17,15,169;92.65

8.ಗದಗ;2,84,473;12,09,451;92.09

9.ರಾಯಚೂರು;4,16,856;23,60,365;91.55

10.ಬೆಂಗಳೂರು ದಕ್ಷಿಣ;3,52,095;11,60,015;91.31

ನಾಲ್ಕು ತಾಲ್ಲೂಕುಗಳು ಶೇ 100 ಪ್ರಗತಿ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮಂಡ್ಯ ಜಿಲ್ಲೆಯ 7 ತಾಲ್ಲೂಕುಗಳ ಪೈಕಿ ನಾಗಮಂಗಲ ಕೃಷ್ಣರಾಜಪೇಟೆ ಮದ್ದೂರು ಮಳವಳ್ಳಿ ಈ ನಾಲ್ಕು ತಾಲ್ಲೂಕುಗಳು ಶೇ 100ರಷ್ಟು ಪ್ರಗತಿ ಸಾಧಿಸಿವೆ.  ಉಳಿದ ಮೂರು ತಾಲ್ಲೂಕುಗಳಾದ ಪಾಂಡವಪುರ (ಶೇ 99.39) ಮಂಡ್ಯ (ಶೇ 95.17) ಶ್ರೀರಂಗಪಟ್ಟಣ (ಶೇ 93.81)ರಷ್ಟು ಪ್ರಗತಿ ಸಾಧಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.