ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ, ಚನ್ನಹಳ್ಳಿ ಮತ್ತು ಬಿದರಹಳ್ಳಿಹುಂಡಿ ಆಸುಪಾಸಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕಾಣಿಸಿಕೊಳ್ಳುತ್ತಿರುವ ವನ್ಯ ಮೃಗವನ್ನು ಹುಲಿ ಎಂದು ವನ್ಯಜೀವಿ ತಜ್ಞರು ಮಂಗಳವಾರ ಸಂಜೆ ಖಚಿತಪಡಿಸಿದ್ದಾರೆ.
ಸುಮಾರು ಒಂದೂವರೆಯಿಂದ ಎರಡು ವರ್ಷ ಪ್ರಾಯದ ಹುಲಿ ಈ ಭಾಗದಲ್ಲಿ ಸುಳಿದಾಡುತ್ತಿದ್ದು, ಚಿರತೆ ಕಾರ್ಯಪಡೆಯ ತಂಡಕ್ಕೆ ಮಂಗಳವಾರ ಸಂಜೆ ಹುಲಿ ಗೋಚರಿಸಿದೆ ಎಂದು ಶ್ರೀರಂಗಪಟ್ಟಣ ವಲಯ ಅರಣ್ಯಾಧಿಕಾರಿ ಪುಟ್ಟಸ್ವಾಮಿ ತಿಳಿಸಿದ್ದಾರೆ. ಹೆಜ್ಜೆ ಗುರುತು, ಸಿಸಿಟಿವಿ ಕ್ಯಾಮೆರಾದಲ್ಲಿ ಸಿಕ್ಕಿರುವ ಸುಳಿವು ಕೂಡ ಇದು ಹುಲಿ ಎಂಬುದನ್ನು ಸಾಬೀತುಪಡಿಸಿವೆ. ಮೈಸೂರು ಸಮೀಪದ ಜೈಪುರ ಬಳಿಯ ಮಾದಾಪುರ ಕಾಡಿನಿಂದ ಹುಲಿ ಇತ್ತ ಬಂದಿರುವ ಸಾಧ್ಯತೆ ಎಂದು ಊಹಿಸಲಾಗಿದೆ.
ಚಿರತೆ ಕಾರ್ಯಪಡೆ ಮತ್ತು ವನ್ಯ ಜೀವಿ ತಜ್ಞರು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಹುಲಿಯ ಸೆರೆಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ತುಮಕೂರು ಕೇಜ್ ತರಿಸಲೂ ಚಿಂತನೆ ನಡೆದಿದೆ. ಹುಲಿ ಕಾಣಿಸಿಕೊಂಡಿರುವ ಸ್ಥಳದತ್ತ ಯಾರೂ ತೆರಳದಂತೆ ಮಹದೇವಪುರ ಮತ್ತು ಆಸುಪಾಸಿನ ಗ್ರಾಮಗಳಲ್ಲಿ ಸ್ಥಳೀಯ ಗ್ರಾ.ಪಂ. ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿಯ ಜತೆಗೆ ಅರಕೆರೆ ಠಾಣೆ ಪೊಲೀಸರು ಕೂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.