ADVERTISEMENT

ಶ್ರೀರಂಗಪಟ್ಟಣ| ಮೀಸಲಾತಿ ಜಾರಿಗೊಳಿಸಿದ್ದ ಒಡೆಯರ್‌: ಧನಂಜಯ ದರಸಗುಪ್ಪೆ

ನಾಲ್ವಡಿಯವರು ಯುಗ ಪುರುಷ– ಧನಂಜಯ ದರಸಗುಪ್ಪೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 14:36 IST
Last Updated 4 ಜೂನ್ 2023, 14:36 IST
ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ ಮತ್ತು ಅರಕೆರೆ ಹೋಬಳಿ ಘಟಕ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ 140ನೇ ಜಯಂತಿಯಲ್ಲಿ ನಾಲ್ವಡಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು
ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ ಮತ್ತು ಅರಕೆರೆ ಹೋಬಳಿ ಘಟಕ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ 140ನೇ ಜಯಂತಿಯಲ್ಲಿ ನಾಲ್ವಡಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು   

ಶ್ರೀರಂಗಪಟ್ಟಣ: ಮೈಸೂರು ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅಡಿಪಾಯ ಹಾಕಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ 20ನೇ ಶತಮಾನದ ಯುಗ ಪುರುಷ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಧನಂಜಯ ದರಸಗುಪ್ಪೆ ತಿಳಿಸಿದರು.

ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಕಸಾಪ ತಾಲ್ಲೂಕು ಘಟಕ ಮತ್ತು ಹೋಬಳಿ ಘಟಕಗಳು ಭಾನುವಾರ ಏರ್ಪಡಿಸಿದ್ದ ನಾಲ್ವಡಿ ಅವರ 140ನೇ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲೇ ಮೊದಲು ಎಂಬಂತೆ ಹಿಂದುಳಿದವರಿಗೆ ಮೀಸಲಾತಿ ಜಾರಿ ಮಾಡಿದರು. ದೇವದಾಸಿ ಪದ್ಧತಿ, ಬಸವಿ ಬಿಡುವುದು, ಗೆಜ್ಜೆ ಪೂಜೆ ಆಚಣೆ, ವೇಶ್ಯಾ ವೃತ್ತಿಗಳನ್ನು ನಿಷೇಧಿಸಿದರು. ವಿಧವಾ ಮರು ವಿವಾಹ ಪ್ರೋತ್ಸಾಹಕ್ಕೆ ಕಾಯ್ದೆ ರೂಪಿಸಿದರು. ಶೋಷಿತರಿಗೆ ಶಾಲೆ ತೆರೆದು ಕ್ರಾಂತಿಕಾರಕ ಯೋಜನೆಗಳ ಮೂಲಕ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದರು ಎಂದು ಹೇಳಿದರು.

ADVERTISEMENT

ಕೃಷಿ ಕ್ಷೇತ್ರದ ಪ್ರಗತಿ, ಕುಡಿಯುವ ನೀರು ಮತ್ತು ವಿದ್ಯುತ್‌ ಉತ್ಪಾದನೆ ದೃಷ್ಟಿಯಿಂದ ಕೆಆರ್‌ಎಸ್‌ ಮತ್ತು ವಾಣಿ ವಿಲಾಸ ಅಣೆಕಟ್ಟೆಗಳನ್ನು ನಿರ್ಮಿಸಿದರು. ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್‌ ಸ್ಥಾಪನೆ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪುನರುಜ್ಜೀವನಕ್ಕೆ ದಾರಿ ತೋರಿದರು. ಭಾರತೀಯ ವಿಜ್ಞಾನ ಸಂಸ್ಥೆ, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಮೂಲಕ ಮಾದರಿ ಮೈಸೂರು ರಾಜ್ಯದ ನಿರ್ಮಾತೃ ಎನಿಸಿದರು. ಆ ಕಾರಣಕ್ಕೆ ಮಹಾತ್ಮ ಗಾಂಧಿ ಅವರಿಂದ ರಾಜರ್ಷಿ ಎಂಬ ಬಿರುದು ಪಡೆದದ್ದು ಅವರ ಹೆಗ್ಗಳಿಕೆ ಎಂದರು.

ಸ್ಥಳೀಯ ಸಂಸ್ಥೆಗಳನ್ನು ರಚಿಸಿ ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿಕೊಟ್ಟರು. ಆಡಳಿತದಲ್ಲಿ ಜನರ ನೇರವಾಗಿ ಭಾಗವಹಿಸಲು ಅವಕಾಶ ಕಲ್ಪಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿದರು. ಇಂತಹ ದೊರೆ ದೇಶದಲ್ಲಿ ಮಾತ್ರವಲ್ಲ; ವಿಶ್ವದಲ್ಲೇ ಅಪರೂಪ ಎಂದು ಹೇಳಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ. ಮಂಜುನಾಥ್‌, ಅರಕೆರೆ ಹೋಬಳಿ ಘಟಕದ ಅಧ್ಯಕ್ಷ ರಾಮಕೃಷ್ಣ, ಅನಿಲ್‌ಬಾಬು, ರಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.